ಸೋಮವಾರಪೇಟೆ,ಜೂ.೨೩: ಮಳೆಗಾಲದಲ್ಲಿ ಮನೆಗೆ ಹಾನಿಯಾಗುವ ಭೀತಿ ಇರುವುದರಿಂದ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮ ಪಂಚಾಯಿತಿ ನೋಟೀಸ್ ನೀಡಿದ್ದರಿಂದ ಅಂಗನವಾಡಿ ಶಿಕ್ಷಕಿ ಹಾಗೂ ಮಗಳು ಸರ್ಕಾರಿ ಶಾಲೆಯ ಕತ್ತಲ ಕೋಣೆಯಲ್ಲಿ ದಿನಕಳೆಯುವಂತಾಗಿದೆ.

ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡತೋಳೂರು ನಿವಾಸಿ ಎ.ಜೆ. ರಮೇಶ್ ಹಾಗೂ ಪ್ರೇಮ ದಂಪತಿ ವಾಸವಿರುವ ಮನೆ ಪ್ರಸ್ತುತದ ಮಳೆಗಾಲದಲ್ಲಿ ಕುಸಿಯುವ ಆತಂಕ ಎದುರಿಸುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಯವರನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಕ್ರಮ ವಹಿಸುವಂತೆ ಜಿಲ್ಲಾಡಳಿತದಿಂದ ನಿರ್ದೇಶನ ಬಂದಿರುವ ಹಿನ್ನೆಲೆ, ಪ್ರೇಮಾ ಅವರಿಗೆ ಸ್ಥಳೀಯ ಗ್ರಾಪಂ.ನಿAದ ನೋಟೀಸ್ ನೀಡಲಾಗಿದೆ.

ಸ್ಥಳೀಯ ಅಂಗನವಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೇಮಾ ಅವರು ವಿಶೇಷ ಚೇತನರಾಗಿದ್ದು, ಇವರ ಪತಿ ರಮೇಶ್ ಅವರು ಬೆಂಗಳೂರಿನಲ್ಲಿ ಗನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ.

(ಮೊದಲ ಪುಟದಿಂದ) ರಮೇಶ್ ಅವರಿಗೆ ಕೋವಿಡ್ ಸೋಂಕು ತಗುಲಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೋಳೂರುಶೆಟ್ಟಳ್ಳಿ ಗ್ರಾ.ಪಂ.ನಿAದ ಇತ್ತ ಪ್ರೇಮಾ ಅವರಿಗೆ ನೋಟೀಸ್ ನೀಡಿದ್ದಾರೆ. ಅನ್ಯಮಾರ್ಗವಿಲ್ಲದೆ ಪ್ರೇಮಾ ಅವರು ಸರ್ಕಾರಿ ಶಾಲೆಗೆ ಸ್ಥಳಾಂತರಗೊAಡಿದ್ದಾರೆ.

ದೊಡ್ಡತೋಳೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಲ್ಲದೇ ಕಳೆ ಕೆಲ ವರ್ಷಗಳಿಂದ ಮುಚ್ಚಲ್ಪಟ್ಟಿದ್ದು, ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಶಾಲೆಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕವನ್ನು ಕೆ.ಇ.ಬಿ.ಯವರು ಕಿತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರೇಮಾ ಹಾಗೂ ಅವರ ೫ ವರ್ಷದ ಪುತ್ರಿ ಶಾಲಾ ಕೊಠಡಿಯೊಂದರಲ್ಲಿ ಕತ್ತಲಿನ ನಡುವೆ ಬದುಕು ಸಾಗಿಸುತ್ತಿದ್ದಾರೆ.

ಸಂಜೆಯಾಗುತ್ತಲೇ ಇಡೀ ಶಾಲೆಯ ಆವರಣದಲ್ಲಿ ಕತ್ತಲಾವರಿಸುತ್ತಿದ್ದು, ಬೆಳಕಿನ ಸೌಲಭ್ಯವಿಲ್ಲದೇ ತಾಯಿ ಹಾಗೂ ಮಗಳು ರಾತ್ರಿ ಕಳೆಯುತ್ತಿದ್ದಾರೆ. ಇವರಿಗೆ ಕನಿಷ್ಟ ಸೀಮೆಎಣ್ಣೆಯ ವ್ಯವಸ್ಥೆಯನ್ನೂ ಸಹ ಮಾಡಿಲ್ಲ. ಮೊಂಬತ್ತಿಯ ಸಹಾಯದಿಂದ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರೊಂದಿಗೆ ಶಾಲೆಯಲ್ಲಿ ಶೌಚಾಲಯದ ಕೊರತೆ, ಶುದ್ಧ ಕುಡಿಯುವ ನೀರಿನ ಕೊರತೆಯೂ ಇದೆ. ದೂರದಲ್ಲಿರುವ ಅಂಗನವಾಡಿಯಿAದ ನೀರನ್ನು ತರಬೇಕಿದ್ದು, ಸ್ನಾನಕ್ಕೆ ಅಂಗನವಾಡಿಯ ಅಡುಗೆ ಕೋಣೆಯ ಬದಿಯಲ್ಲಿ ಪಾತ್ರೆ ತೊಳೆಯಲು ಬಳಸುವ ಸಣ್ಣ ಸ್ಥಳವನ್ನೇ ಅವಲಂಬಿಸಬೇಕಿದೆ.

ರಾತ್ರಿ ವೇಳೆಯಲ್ಲಿ ಶೌಚಾಲಯಕ್ಕೆ ತೆರಳಲು ಅಸಾಧ್ಯವಾಗಿದೆ. ಸುತ್ತಲೂ ಕತ್ತಲಾವರಿಸುತ್ತಿದ್ದು, ಬೆಳಕಿನ ವ್ಯವಸ್ಥೆ ಇಲ್ಲವಾಗಿದೆ. ಇಂತಹ ಕತ್ತಲ ಕೋಣೆಯಲ್ಲಿರುವ ಇವರುಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ತಿರುಗಿಯೂ ನೋಡಿಲ್ಲ. ಅಂಗನವಾಡಿಗೆ ರಜೆ ಇರುವುದರಿಂದ ಶಿಕ್ಷಕಿಯನ್ನು ಕೋವಿಡ್ ಸಂಬAಧಿತ ಕೆಲಸ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಪ್ರಸ್ತುತ ಪ್ರೇಮಾ ಅವರು ನೆಲೆಸಿರುವ ಶಾಲಾ ಕೊಠಡಿಯಲ್ಲಿ ಮಳೆ ನೀರು ಜಿನುಗುತ್ತಿದೆ. ಮಳೆಗಾಲದಲ್ಲಿ ಕೊಠಡಿಯೊಳಗೆ ನೀರು ಶೇಖರಣೆಯಾಗುತ್ತಿದೆ. ಶಾಲೆಯ ಛಾವಣಿ ಶಿಥಿಲಾವಸ್ಥೆಗೆ ತಲುಪಿದೆ. ಪತಿ ರಮೇಶ್ ಹಾಗೂ ಸಹೋದರ ಕೃಷ್ಣಪ್ಪ ಅವರುಗಳು ವಾಸವಿರುವ ಮನೆಯೂ ಶಿಥಿಲಾವಸ್ಥೆಯಲ್ಲಿದ್ದು, ಮಳೆಗೆ ಬೀಳುವ ಅಪಾಯದಲ್ಲಿದೆ. ಇದೇ ಕಾರಣಕ್ಕೆ ಪ್ರೇಮಾ ಅವರಿಗೆ ನೋಟೀಸ್ ನೀಡಲಾಗಿತ್ತು.

ಕಳೆದ ಆರೇಳು ವರ್ಷಗಳಿಂದ ಸರ್ಕಾರದಿಂದ ಮನೆ ಮಂಜೂರು ಮಾಡಿಕೊಡುವಂತೆ ಗ್ರಾ.ಪಂ.ಗೆ ನಿರಂತರ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಕೇಳಿದರೆ ಕೋವಿಡ್ ಇದೆಯಲ್ಲ? ಎಂದು ಸಾಗಹಾಕುತ್ತಿದ್ದಾರೆ. ನೆಲೆಸಲು ನೆಲೆ ಇಲ್ಲದ ಪರಿಸ್ಥಿತಿಯಲ್ಲೂ ಪ್ರೇಮಾ ಅವರು ಕೋವಿಡ್ ಸಂಬAಧಿತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಕೊಠಡಿಗೆ ಸ್ಥಳಾಂತರಗೊAಡಿರುವ ಇವರಿಗೆ ಸ್ಥಳೀಯ ಗ್ರಾ.ಪಂ. ನೋಟೀಸ್ ನೀಡಿದ್ದನ್ನು ಹೊರತುಪಡಿಸಿದರೆ ಇತರ ಯಾವ ಸೌಕರ್ಯವನ್ನೂ ಒದಗಿಸಿಲ್ಲ. ಬಿಪಿಎಲ್ ಕಾರ್ಡ್ ಇದ್ದರೂ ಸೀಮೆಎಣ್ಣೆ ಕೊಟ್ಟಿಲ್ಲ.

ನಮಗೆ ಸದ್ಯದ ಮಟ್ಟಿಗೆ ದಿನಸಿ ಪದಾರ್ಥ ಬೇಡ;ಬೆಳಕಿನ ವ್ಯವಸ್ಥೆ ಕಲ್ಪಿಸಿದರೆ ಸಾಕು. ಕೊರೊನಾ ಕಡಿಮೆಯಾದ ನಂತರ ನಮ್ಮದೇ ಜಾಗದಲ್ಲಿ ಮನೆ ನಿರ್ಮಿಸಲು ಸರ್ಕಾರದ ಯೋಜನೆಯಿಂದ ಅನುದಾನ ಒದಗಿಸಿದರೆ ಸ್ವಂತ ಸೂರು ಕಟ್ಟಿಕೊಂಡು ಬದುಕು ಸಾಗಿಸುತ್ತೇವೆ ಎಂದು ಪ್ರೇಮಾ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಪಂಚಾಯಿತಿಯಿAದ ನೋಟೀಸ್ ನೀಡಲಾಗಿದೆ. ಆದರೆ ಸರ್ಕಾರಿ ಶಾಲೆಗೆ ಸ್ಥಳಾಂತರಗೊAಡಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಪಿಡಿಓ ತಿಳಿಸಿದ್ದಾರೆ. ತಾ. ೨೪ರಂದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ. ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

- ವಿಜಯ್ ಹಾನಗಲ್