ಪೊನ್ನಂಪೇಟೆ, ಜೂ.೨೪: ಕುಡಿದ ಮತ್ತಿನಲ್ಲಿ ಏಡಿ ಶುಚಿ ಮಾಡಲೆಂದು ಕೆರೆಯ ಬಳಿ ತೆರಳಿದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದೆ.

ಪಂಜರಿ ಯರವರ ನಾರಾಯಣ (೪೫) ಎಂಬಾತ ಕುಡಿದ ಅಮಲಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡ ದುರ್ದೈವಿ. ಸುಳುಗೋಡು ಗ್ರಾಮದ ಕೊಕ್ಕೆಂಗಡ ಜಯ ಮೇದಪ್ಪ ಅವರ ಲೈನ್ ಮನೆಯಲ್ಲಿ ತನ್ನ ಹೆಂಡತಿ ಚಾವುಂಡಿಯೊAದಿಗೆ ವಾಸವಾಗಿದ್ದ ನಾರಾಯಣ ತಾ. ೨೩ ರಂದು ಸಂಜೆ ೫.೪೫ ರ ಸಮಯದಲ್ಲಿ ಗದ್ದೆಯಲ್ಲಿ ಏಡಿ ಹಿಡಿದು, ಸಮೀಪದ ಕೆರೆಯಲ್ಲಿ ಶುಚಿ ಮಾಡಲು ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಸ್ಥಳೀಯರು ನೀರಿನಲ್ಲಿ ತೇಲುತ್ತಿರುವ ಮೃತ ದೇಹವನ್ನು ಹೊರತೆಗೆದಿದ್ದಾರೆ. ಆ ಬಳಿಕ ೧೧೨ ತುರ್ತು ಸಹಾಯವಾಣಿಗೆ ಕರೆಮಾಡಲಾಗಿದ್ದು, ಎ.ಎಸ್.ಐ.ನಂಜಪ್ಪ ಕೂಡಲೇ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ. ನಂತರ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಡಿ.ಕುಮಾರ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.