ಚೆಟ್ಟಳ್ಳಿ, ಜೂ. ೨೪: ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸುವುದು, ಕಂದಕ ನಿರ್ಮಾಣ, ಸೋಲಾರ್ ಬೇಲಿ, ಕಾಡಾನೆ ಕಾವಲಿಗೆ ಮನೆ ಇತ್ಯಾದಿ ಕ್ರಮಗಳನ್ನು ಕೈಗೊಂಡರೂ ಕೂಡ ರಾತ್ರಿಯಾದೊಡನೆ ಕಾಡಾನೆಗಳು ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದಲ್ಲಿ ಸುತ್ತಾಡುತ್ತಿವೆ.

ಕಳೆದ ಎರಡು ದಿನಗಳ ಹಿಂದೆ ಈರಳೆ ಗ್ರಾಮದ ಜಯ ಮುತ್ತಪ್ಪ ಅವರ ಫಸಲಿಗೆ ಬಂದ ಹತ್ತು ವರ್ಷದ ಸುಮಾರು ೬೦ ರಿಂದ ೭೦ ಗಿಡಗಳನ್ನು ಸಂಪೂರ್ಣ ನಾಶಪಡಿಸಿವೆ. ಕಳೆದ ವರ್ಷವೂ ಇದೇ ತೋಟದಲ್ಲಿ ೧೫೦ ಅಡಿಕೆ ಗಿಡಗಳನ್ನು ನಾಶಪಡಿಸಿದೆ.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜನಪರ ಹೊರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಆನೆ ದಾಳಿಯಿಂದ ನಷ್ಟಗೊಂಡ ಜಯ ಮುತ್ತಪ್ಪ ಅವರ ತೋಟಕ್ಕೆ ಭೇಟಿ ನೀಡಿದರು. ಕಾಡಾನೆಗಳಿಂದ ಈ ಭಾಗದ ಹಲವರಿಗೆ ನಷ್ಟ ಸಂಭವಿಸಿದ್ದು, ಅರಣ್ಯ ಇಲಾಖೆಯೆ ನೇರಹೊಣೆ. ಅರಣ್ಯ ಇಲಾಖಾಧಿಕಾರಿಗಳೇ ಖುದ್ದು ಭೇಟಿ ನೀಡಿ ತಕ್ಷಣವೇ ನಷ್ಟ ಪರಿಹಾರ ನೀಡಬೇಕು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕೈಗೊಳ್ಳದಿದ್ದರೆ ಪ್ರತಿಭಟನೆಯೊಂದಿಗೆ ಕಾನೂನು ಹೋರಾಟ ಮಾಡಲಾಗುವುದೆಂದು ಮಣಿ ಉತ್ತಪ್ಪ ಹಾಗೂ ಕಂಠಿ ಕಾರ್ಯಪ್ಪ ಎಚ್ಚರಿಸಿದ್ದಾರೆ.