ಕಾಡಾನೆ ಧಾಳಿ-ಬೆಳೆ ನಷ್ಟ : ಶಾಶ್ವತ ಪರಿಹಾರಕ್ಕೆ ಒತ್ತಾಯ

ನಾಪೋಕ್ಲು, ಜೂ. ೨೩: ಕೋಕೇರಿ ಗ್ರಾಮದ ಮಚ್ಚಂಡ ಮತ್ತು ಪೆಮ್ಮಂಡ ಕುಟುಂಬಸ್ಥರ ಕಾಫಿ, ತೆಂಗು, ಅಡಿಕೆ, ಬಾಳೆ ಸೇರಿದಂತೆ ಎಲ್ಲಾ ಬೆಳೆಗಳನ್ನು ಕಾಡಾನೆಗಳು ನಾಶಗೊಳಿಸುತ್ತಿವೆ. ಅವುಗಳನ್ನು ಸ್ಥಳಾಂತರಿಸುವ ಮೂಲಕ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಈ ವ್ಯಾಪ್ತಿಯ ಬೆಳೆಗಾರರು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಕಳೆದ ೨೨ ದಿನಗಳಿಂದ ಕೋಕೇರಿ ಗ್ರಾಮದಲ್ಲಿ ೫ ಕಾಡಾನೆಗಳ ಹಿಂಡು ವಾಸವಾಗಿದ್ದು, ಸುತ್ತಮುತ್ತಲಿನ ಕಾಫಿ ತೋಟಗಳನ್ನು ಸಂಪೂರ್ಣವಾಗಿ ನಾಶಗೊಳಿಸುತ್ತಿವೆ. ಅರಣ್ಯ ಇಲಾಖೆ ಇವುಗಳನ್ನು ಕಾಡಿಗಟ್ಟುವ ಸಂದರ್ಭ ಚೇಲಾವರ ಗ್ರಾಮಕ್ಕೆ ತೆರಳುತ್ತವೆ. ಅಲ್ಲಿಂದ ಬೆದರಿಸಿದ ಸಂದರ್ಭ ಕೋಕೇರಿ ಗ್ರಾಮಕ್ಕೆ ಬಂದು ನೆಲೆಸುತ್ತವೆ. ಇದರಿಂದ ಎರಡು ಗ್ರಾಮಗಳ ಜನರು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ. ಸಂಜೆಯಾದರೆ ರಸ್ತೆಯಲ್ಲಿ ನಡೆದಾಡಲು ಕೂಡ ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ. ಕಾಡಾನೆ ಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕೆಂದು ಗ್ರಾಮದ ಮಚ್ಚಂಡ ಸುಮತಿ, ಮತ್ತಿತರರು ಆಗ್ರಹಿಸಿದ್ದಾರೆ.

-ಪಿ.ವಿ.ಪ್ರಭಾಕರ್