ಕುಶಾಲನಗರ, ಜೂ. ೨೩: ಹಾರಂಗಿ ಜಲಾಶಯದ ಹೂಳೆತ್ತಲು ಕಾವೇರಿ ನೀರಾವರಿ ನಿಗಮದ ಮೂಲಕ ಕರೆದಿರುವ ೧೩೦ ಕೋಟಿ ರೂ ಟೆಂಡರ್ ರದ್ದುಗೊಂಡಿದೆ. ತಾಂತ್ರಿಕವಾಗಿ ಅರ್ಹರಾದ ಗುತ್ತಿಗೆದಾರರು ಲಭ್ಯವಾಗದ ಕಾರಣ ಹಳೆ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಕರೆಯಲಾಗಿದೆ.
ಹಾರಂಗಿ ಜಲಾಶಯದ ಹೂಳೆತ್ತುವುದು ಮತ್ತು ಜಲಾಶಯದ ವೈಜ್ಞಾನಿಕ ನಿರ್ವಹಣೆಗೆ ರಾಜ್ಯಸರ್ಕಾರ ೧೩೦ ಕೋಟಿ ರೂ ಅನುದಾನ ಕಲ್ಪಿಸಿತ್ತು. ಅಂತಿಮ ಹಂತದಲ್ಲಿ ಕೇವಲ ಇಬ್ಬರು ಟೆಂಡರುದಾರರು ಮಾತ್ರ ಭಾಗವಹಿಸಿದ್ದು ತಾಂತ್ರಿಕ ಕಾರಣದಿಂದ ರದ್ದುಗೊಳಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಹೊಸ ಟೆಂಡರ್ ಜೂನ್ ೧೪ ರಂದು ಕರೆಯಲಾಗಿದ್ದು, ೨೯ ಕೊನೆಯ ದಿನವಾಗಿದೆ.
ಈ ನಡುವೆ ಹಾರಂಗಿ ಜಲಾಶಯದ ಹೂಳೆತ್ತಲು, ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸೋಮವಾರ ಪೇಟೆ ತಾಲೂಕಿನ ಬೆಳೆಗಾರ ನಂದಬೆಳ್ಳಿಯಪ್ಪ ಮತ್ತು ಮೂವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಟೆಂಡರ್ ಬಗ್ಗೆ ನ್ಯಾಯಾಲಯಕ್ಕೆ ಸರ್ಕಾರ ಮಾಹಿತಿ ನೀಡಿದೆ. ಮುಖ್ಯ ನ್ಯಾಯಾಧೀಶರಾದ ಎ.ಎಸ್. ಓಕ ನೇತೃತ್ವದ ವಿಭಾಗೀಯ ಫೀಠ ಮಂಗಳವಾರ ವಿಚಾರಣೆ ನಡೆಸಿದ್ದು, ಟೆಂಡರ್ಗೆ ಸಂಬAಧಿಸಿದ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದೆ. ಮತ್ತೆ ವಿಚಾರಣೆಯನ್ನು ಜೂನ್ ೨೯ಕ್ಕೆ ಮುಂದೂಡಿದೆ. -ಚಂದ್ರಮೋಹನ್