ಸಿದ್ದಾಪುರ, ಜೂ. ೨೩: ಸಿದ್ದಾಪುರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಬುಧವಾರದಂದು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ನಿನ್ನೆ ದಿನ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳು ಸಂಚರಿಸದAತೆ ಹಾಗೂ ಜನಜಂಗುಳಿ ಸೇರದ ರೀತಿಯಲ್ಲಿ ಕಠಿಣ ಕ್ರಮಗಳನ್ನು ಅನುಸರಿಸಲು ತಹಶೀಲ್ದಾರ್ ನಿರ್ದೇಶನ ನೀಡಿದ್ದ ಹಿನ್ನೆಲೆ ಸಿದ್ದಾಪುರ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಐದು ತರಕಾರಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದರು.

ಬಸ್ ನಿಲ್ದಾಣದೊಳಗೆ ಯಾವುದೇ ವಾಹನಗಳು ಪ್ರವೇಶಿಸದಂತೆ ಹಾಗೂ ವಾಹನಗಳನ್ನು ನಿಲ್ಲಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದಾಗಿ ಜನಸಂದಣಿ ಗುಂಪು ಗುಂಪಾಗಿ ಕಂಡುಬರಲಿಲ್ಲ. ಮಧ್ಯಾಹ್ನ ಒಂದು ಗಂಟೆಯ ಬಳಿಕ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಪೊಲೀಸರು ದಂಡ ವಿಧಿಸಿದರು. ಮುಂದಿನ ದಿನಗಳಲ್ಲಿಯು ಕೂಡ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ವಾಹನ ಸಂಚಾರಕ್ಕೆ ಹಾಗೂ ನಿಲುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಠಾಣಾಧಿಕಾರಿ ಮೋಹನ್ ರಾಜ್ ತಿಳಿಸಿದರು.