ಸೋಮವಾರಪೇಟೆ,ಜೂ.೨೩: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಬಸವನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ನಿನ್ನೆ ರಾತ್ರಿ ಕೃಷಿಕ ಸುಂದರಮೂರ್ತಿ ಅವರಿಗೆ ಸೇರಿದ ಶುಂಠಿ ಕೃಷಿ ಭೂಮಿಗೆ ಕಾಡಾನೆಗಳು ನುಗ್ಗಿ ನಷ್ಟಪಡಿಸಿವೆ.

ಯಡವನಾಡು ಮೀಸಲು ಅರಣ್ಯದಿಂದ ರಾತ್ರಿ ಸಮಯದಲ್ಲಿ ಆಗಮಿಸಿರುವ ಕಾಡಾನೆಗಳು ಕೃಷಿ ಫಸಲನ್ನು ತುಳಿದು ಹಾನಿ ಪಡಿಸುತ್ತಿವೆ ಎಂದು ಸುಂದರಮೂರ್ತಿ ಹೇಳಿದ್ದಾರೆ. ಕಾಡಾನೆಗಳಿಂದ ಯಾವುದೇ ಫಸಲು ಬೆಳೆಯಲು ಸಾಧ್ಯವಾಗುತ್ತಿಲ್ಲ. ಭತ್ತ ಬೆಳೆಯುವುದನ್ನೇ ಬಿಟ್ಟಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಅರಣ್ಯದ ಸುತ್ತ ಸೋಲಾರ್ ತಂತಿಬೇಲಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.

ಬೇಳೂರು, ಕಾರೇಕೊಪ್ಪ, ಕುಸುಬೂರು, ಕೆಂಚಮ್ಮನಬಾಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಿಗದಿತ ಸಮಯದಲ್ಲಿ ಕಾಫಿ ತೋಟಗಳ ನಿರ್ವಹಣೆ ಅಸಾಧ್ಯವಾಗಿದೆ ಎಂದು ಕೃಷಿಕ ಸಂಪತ್ ಅಭಿಪ್ರಾಯಿಸಿದ್ದಾರೆ.