ಚೆಟ್ಟಳ್ಳಿ, ಜೂ. ೨೩: ರಾತ್ರಿ ಒಂಟಿ ಕಾಡಾನೆಯೊಂದು ಮನೆಯ ಮುಂದಿನ ಅಂಗಳದಲ್ಲಿ ಸುಳಿದಾಡುತ್ತಿದ್ದುದನ್ನು ಕಂಡು ಕಾಡಾನೆಯನ್ನು ಓಡಿಸಲು ಮುಂದಾದ ಸಂದರ್ಭ ಕಾಡಾನೆ ತಿರುಗಿಬಂತೆAದು ಮನೆಯ ಹಿಂಬದಿಗೆ ಓಡಿದ ರಭಸಕ್ಕೆ ಮೆಟ್ಟಿಲುತಾಗಿ ಯುವಕನೋರ್ವ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದಲ್ಲಿ ಕಾಡಾನೆಗಳು ಓಡಾಡುತ್ತಿದ್ದು, ಭಾನುವಾರ ರಾತ್ರಿ ೧೧ ಗಂಟೆಗೆ ಒಂಟಿ ಕಾಡಾನೆಯೊಂದು ಚೆಟ್ರಂಡ ರಾಜ ಎಂಬವರ ಮನೆಯ ಸುತ್ತ ಸುಳಿದಾಡುತ್ತಿತ್ತು. ನಾಯಿಗಳು ಕಾಡಾನೆಯನ್ನು ಕಂಡು ಬೊಗಳತೊಡಗಿತು. ಚೆಟ್ರಂಡ ರಾಜ ಅಪ್ಪಯ್ಯ ಅವರ ಮಗ ಕೌಶಿಕ್ ಕಾರ್ಯಪ್ಪ ಕಾಡಾನೆಯ ಸದ್ದಿಗೆ ಮನೆಯ ಹೊರಬಂದು ನೋಡುತ್ತಿದ್ದಂತೆ ಕಾಡಾನೆ ಮನೆಯಿಂದ ಸಮೀಪದ ಮಾರುತಿ ವ್ಯಾನನ್ನು ಜಖಂಗೊಳಿಸಿತು. ಕಾಡಾನೆಯನ್ನು ಓಡಿಸಲು ಪಕ್ಕದಲ್ಲಿ ಕೈಗೆ ಸಿಕ್ಕ ಕುರ್ಚಿಯನ್ನು ಕಾಡಾನೆಗೆ ಎಸೆದಾಗ ಕಾಡಾನೆ ಜೋರಾಗಿ ಘೀಳಿಟ್ಟಿತು. ಮನೆ ಸಮೀಪ ನಿಂತಿದ್ದ ಕಾಡಾನೆ ಹತ್ತಿರ ಬರುತ್ತಿದ್ದಂತೆ ಕೌಶಿಕ್ ಹೆದರಿ ಹಿಂದಿರುಗಿ ಓಡಿದ ರಭಸಕ್ಕೆ ಮೆಟ್ಟಿಲುತಾಗಿ ನಡೆಯಲಾಗದೆ ಅಲ್ಲೇ ಕುಸಿದರು.

ಕಾಲಿನಭಾಗ ಓಡಿದ ರಭಸಕ್ಕೆ ಸೀಳಿಹೋಗಿದ್ದು ಆಸ್ಪತ್ರೆಗೆ ತೆರಳಲು ಪಕ್ಕದವರಿಗೆ ಫೋನಾಯಿಸಿದರೂ ಸಂಪರ್ಕಕ್ಕೆ ಸಿಗದೆ ಗಾಯದಲ್ಲೇ ಪಕ್ಕದ ಮೈಸ್ ಇಂಡಿಯಾ ತೋಟದ ರೈಟರ್ ಶರವಣನ್ ಅವರ ಮನೆಗೆ ಓಡಿ ಅವರ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳಿ ಕಾಲಿಗೆ ಹೊಲಿಗೆ ಹಾಕುವ ಮೂಲಕ ಚಿಕಿತ್ಸೆ ನೀಡಲಾಯಿತು. ಮನೆಯಲ್ಲಿ ತಂದೆ ಹಾಗೂ ಅತ್ತೆ ಮಾತ್ರ ಇರುವುದರಿಂದ ಆಸ್ಪತ್ರೆಯಲ್ಲಿ ದಾಖಲಾಗದೆ ಮನೆಗೆ ಹಿಂದಿರುಗಿದ. ಕೌಶಿಕ್ ಜೊತೆ ಆಸ್ಪತ್ರೆಗೆ ತೆರಳಿದ ಅಡಿಕೇರ ಕಾರ್ಯಪ್ಪ ಅರಣ್ಯ ಇಲಾಖಾಧಿಕಾರಿಗೆ ಮಾಹಿತಿ ನೀಡಿದರು.

ರಾತ್ರಿ ೨ ಗಂಟೆಗೆ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ತಲುಪುತ್ತಿದ್ದಂತೆ ಒಂಟಿ ಕಾಡಾನೆ ಮನೆಯ ಹತ್ತಿರವೇ ಸುಳಿದಾಡುತ್ತಿತ್ತು. ಅಪಾಯ ಅರಿತ ಮನೆಯವರು ಗಾಳಿಗೆ ಗುಂಡು ಹಾರಿಸಿದ ಬಳಿಕ ಕಾಡಾನೆ ಓಡಿತು. ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ತಿಳಿಸಿದ ಮೇರೆಗೆ ಅರಣ್ಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲವು ದಿನಗಳಿಂದ ಈರಳೆವಳಮುಡಿ ಗ್ರಾಮದಲ್ಲಿ ಕಾಡಾನೆಗಳು ಓಡಾಡುತ್ತಾ ತೊಂದರೆ ನೀಡುತ್ತಿರುವ ಬಗ್ಗೆ ಸ್ಥಳೀಯರಾದ ಪೊರಿಮಂಡ ದಿನಮಣಿ ಪೂವಯ್ಯ ತಿಳಿಸಿದ್ದಾರೆ.

ಕ್ರಮಕೈಗೊಳ್ಳುವಂತೆ ಆಗ್ರಹ

ಗಾಯಾಳು ಚೆಟ್ರಂಡ ಕೌಶಿಕ್ ಮನೆಗೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜನರಪರ ಹೋರಾಟ ಸಮಿತಿ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ತೆರಳಿ ಪರಿಶೀಲಿಸಿ, ಈರಳೆ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ತಕ್ಷಣವೇ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಕಾಡಾನೆಯಿಂದ ತೊಂದರೆಗೊಳಗಾದ ಚೆಟ್ರಂಡ ಕೌಶಿಕ್‌ಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಜರಿದ್ದರು. -ಪುತ್ತರಿರ ಕರುಣ್‌ಕಾಳಯ್ಯ