ಗೋಣಿಕೊಪ್ಪಲು, ಜೂ. ೨೩: ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ವತಿಯಿಂದ ಮುಂಗಾರು ಜಾನಪದ ಕಲರವ-೨೦೨೧ ಜಾನಪದ ಪರಿಕರಗಳ ಸ್ಪರ್ಧೆಯನ್ನು ಮಳೆ ಹಾಗೂ ವಿದ್ಯುತ್ ಸಮಸ್ಯೆ ಹಿನ್ನೆಲೆ ಹಾಗೂ ಸ್ಪರ್ಧಾಳುಗಳ ಕೋರಿಕೆ ಮೇರೆಗೆ ತಾ. ೩೦ ರವರೆಗೆ ಮುಂದೂಡಲಾಗಿದೆ. ಬಹುಮಾನ ವಿತರಣೆ ಹಾಗೂ ಆನ್ಲೈನ್ ಹರಟೆಕಟ್ಟೆ ಕಾರ್ಯಕ್ರಮವನ್ನು ಜುಲೈ ೪ರಂದು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಘಟಕದ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ತಿಳಿಸಿದ್ದಾರೆ.
ವಿನೂತನ ಕಾರ್ಯಕ್ರಮದ ಅಂಗವಾಗಿ ಮನೆಗಳಲ್ಲಿರುವ ಜಾನಪದ (ಪುರಾತನ) ಪರಿಕರಗಳ ವೀಡಿಯೋ ಪ್ರದರ್ಶನದ ೨ ನಿಮಿಷದ ಅವಧಿಯ (ಗರಿಷ್ಠ ೩ ನಿಮಿಷ) ಕಾರ್ಯಕ್ರಮವನ್ನು ಚಿತ್ರೀಕರಿಸುವದು, ಪರಿಕರಗಳ ಸೂಕ್ತ ಮಾಹಿತಿಯೊಂದಿಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಲು ತಾ. ೩೦ ರ ರಾತ್ರಿ ೧೨ ಗಂಟೆಯವರೆಗೆ ವಿಸ್ತರಿಸಲಾಗಿದೆ.
ತಾ. ೪ ರಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ವಿವಿಧ ಘಟಕಗಳ ಪದಾಧಿಕಾರಿಗಳಿಗಾಗಿ ‘ಝೂಮ್’ ವೇದಿಕೆಯ ಮೂಲಕ ಹರಟೆ ಕಟ್ಟೆ ಎಂಬ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸ ಲಾಗಿದ್ದು, ಭಾಗವಹಿಸುವವರು, ಚುಟುಕು, ಹಾಸ್ಯ ಚಟಾಕಿ, ಜಾನಪದ ಗೀತೆ, ಗಾದೆ ಪೂರ್ಣಗೊಳಿಸುವದು, ಪುಟ್ಟ ಕತೆ ಹೇಳುವದು, ಒಗಟು ಕೇಳುವುದು, ಸೇರಿದಂತೆ ನಿಗದಿತ ವಿಷಯಗಳ ಪೈಕಿ ಪ್ರತಿ ಘಟಕಗಳು ಯಾವುದೇ ೩ ವಿಷಯವನ್ನು ಆಯ್ಕೆ ಮಾಡಿಕೊಂಡು ನಿರ್ಧಾರಿತ ಅವಧಿಯಲ್ಲಿ ಪ್ರತೀ ಘಟಕಗಳು ಕಾರ್ಯಕ್ರಮ ನೀಡಬಹುದಾಗಿದೆ.
ಹರಟೆ ಕಟ್ಟೆಯಲ್ಲಿ ಒಬ್ಬ ಸದಸ್ಯರಿಗೆ ಒಂದು ವಿಷಯದಲ್ಲಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು ಹೆಸರು ನೋಂದಾವಣೆಗೆ ತಾ. ೨೯ ಅಂತಿಮ ದಿನವಾಗಿರುತ್ತದೆ.
ಜಾನಪದ ಪರಿಕರ ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನವನ್ನು ನೀಡಲಾಗುವದು. ಹೆಚ್ಚಿನ ವಿವರಗಳಿಗೆಗೆ ೯೬೧೧೬೪೦೫೫೨ ಹಾಗೂ ೮೦೫೦೦೨೩೪೨೨ ಸಂಖ್ಯೆಗೆ ಕರೆ ಮಾಡಬಹುದು.