ಮಾಲಿನ್ಯ ನಿಯಂತ್ರಣ ಮಂಡಳಿ

ಮಡಿಕೇರಿ: ಮಡಿಕೇರಿ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಬಳಿಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ಕಾರ್ಯಕ್ರಮದಲ್ಲಿ ಅರಣ್ಯ ಸಸಿಗಳನ್ನು ನೆಡಲಾಯಿತು.

ಅರಣ್ಯ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಗಿಡನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕೆಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ನಗರದ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಜೋಸೆಫ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ, ಮಂಡಳಿಯ ಸಿಬ್ಬಂದಿ ಮಂಜುನಾಥ್ ಇತರರು ಇದ್ದರು.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕ

ಪೊನ್ನಂಪೇಟೆ: ಪರಿಸರ ದಿನಾಚರಣೆ ಕೇವಲ ಫೋಟೋಕ್ಕಾಗಿ ಅಥವಾ ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಬಾರದು. ಬದಲಿಗೆ ಸ್ವಯಂ ಪ್ರೇರಣೆಯ ಪರಿಸರ ಸಂರಕ್ಷಣೆ ಎಂಬ ಸಂಕಲ್ಪ ನಿತ್ಯ ಕಾಯಕವಾಗಬೇಕು ಎಂದು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ, ಉಪನ್ಯಾಸಕ ಎಂ.ಎನ್. ವನಿತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾರತೀಯ ಜೇಸಿಸ್‌ನ ವಲಯ ೧೪ರ ಕಾರ್ಯಕ್ರಮ ವಿಭಾಗದ ಕರೆಯಂತೆ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಆನ್‌ಲೈನ್ ಮೂಲಕ ಆಯೋಜಿಸಲಾಗಿದ್ದ ‘ಹಸಿರು ಸಪ್ತಾಹ-೨೦೨೧'ರ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರಿಗೆ ‘ಪರಿಸರ ಪ್ರತಿಜ್ಞೆ' ಬೋಧಿಸಿ ಮಾತನಾಡಿದ ಅವರು, ಕೇವಲ ಗಿಡಗಳನ್ನು ನೆಟ್ಟ ಮಾತ್ರಕ್ಕೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಮುಗಿಯುವುದಿಲ್ಲ. ಸುತ್ತಮುತ್ತಲಿನ ನೈಸರ್ಗಿಕ ಪರಿಸರವನ್ನು ಸುರಕ್ಷಿತವಾಗಿ ಉಳಿಸಿಕೊಂಡು ಕಾಪಾಡುವುದು ಕೂಡ ಪರಿಸರ ಸಂರಕ್ಷಣೆಯ ಭಾಗವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಘಟಕದ ಸ್ಥಾಪಕ ಉಪಾಧ್ಯಕ್ಷ ಡಾ. ಬಿ.ಎಂ. ಗಣೇಶ್, ಜನಜೀವನವನ್ನು ತಲ್ಲಣಗೊಳಿಸಿರುವ ಕೋವಿಡ್ ಕಾಲದಲ್ಲಿ ಆಮ್ಲಜನಕದ ಮಹತ್ವ ಚೆನ್ನಾಗಿ ಅರಿವಾಗಿದೆ. ಆಮ್ಲಜನಕ ‘ಕಾಮಧೇನು'ವಾಗಬೇಕಾದರೆ ನೈಸರ್ಗಿಕ ಪರಿಸರ ಸಂರಕ್ಷಣೆಯಾಗಲೇಬೇಕು. ಪರಿಸರದ ರಕ್ಷಣೆ ಎಂಬುದು ಮನುಷ್ಯರ ನಿತ್ಯ ಜೀವನದ ಒಂದು ಭಾಗವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಜೇಸಿಸ್‌ನ ವಲಯ ೧೪ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಫೀಕ್ ತೂಚಮಕೇರಿ, ಪೂರ್ವ ವಲಯಾಧಿಕಾರಿ ಮತ್ತು ಗೋಣಿಕೊಪ್ಪಲು ಎಂಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಈ. ಕಿರಣ್, ಘಟಕದ ಪೂರ್ವಾಧ್ಯಕ್ಷರಾದ ಮುಕ್ಕಾಟಿರ ಸಂದೀಪ್, ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಎ.ಪಿ. ದಿನೇಶ್, ಸದಸ್ಯರಾದ ಶರತ್ ಸೋಮಣ್ಣ ಮೊದಲಾದವರು ಮಾತನಾಡಿದರು.

ಹಸಿರು ಸಪ್ತಾಹದ ಅಂಗವಾಗಿ ಘಟಕದ ಪ್ರತೀ ಸದಸ್ಯರು ಅವರ ಮನೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಸದಸ್ಯರಾದ ಪಿ.ಎಂ. ಮೆಹರೂಫ್ ಜೇಸಿವಾಣಿ ವಾಚಿಸಿದರು. ಕೋಶಾಧಿಕಾರಿ ಕುಪ್ಪಂಡ ದಿಲನ್ ಹಸಿರು ಸಪ್ತಾಹದ ವರದಿ ವಾಚಿಸಿದರು. ಘಟಕದ ಉಪಾಧ್ಯಕ್ಷ ಎನ್.ಜಿ. ಸುರೇಶ್ ಸ್ವಾಗತಿಸಿದರು. ನಿರ್ದೇಶಕರಾದ ಎಂ.ಎಸ್. ಸರ್ಫುದ್ದೀನ್ ವಂದಿಸಿದರು.

ಡಿ.ಡಿ.ಪಿ.ಐ. ಕಚೇರಿ ಆವರಣ

ಮಡಿಕೇರಿ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ರಾಷ್ಟಿçÃಯ ಹಸಿರು ಪಡೆ, ಅರಣ್ಯ ಇಲಾಖೆಯ ಮಡಿಕೇರಿ ನಗರದ ಅರಣ್ಯ ವಲಯ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಗರದ ನೂತನ ಡಿಡಿಪಿಐ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಮಾಸಾಚರಣೆ ಮತ್ತು ಪರಿಸರ ಜಾಗೃತಿ ಆಂದೋಲನದಲ್ಲಿ ಅರಣ್ಯ ಸಸಿಗಳನ್ನು ನೆಡಲಾಯಿತು. ಗಿಡ ನೆಡುವ ಮೂಲಕ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿದ ಡಿ.ಡಿ.ಪಿ.ಐ. ಪೆರಿಗ್ರೀನ್ ಎಸ್. ಮಚ್ಚಾಡೋ ಮಾತನಾಡಿ, ಶುದ್ಧ ಗಾಳಿ ಮತ್ತು ಪರಿಸರ ಸಂರಕ್ಷಣೆಗಾಗಿ ನಾವು ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಸಂಕಲ್ಪ ತೊಡಬೇಕು ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಂ. ಕೃಷ್ಣಪ್ಪ ಪರಿಸರ ಚಟುವಟಿಕೆಗಳ ಕುರಿತು ತಿಳಿಸಿದರು.

ಮಡಿಕೇರಿ ತಾಲೂಕು ಪ್ರಭಾರ ಬಿಇಓ ಗುರುರಾಜ್, ತಾಲೂಕು ಬಿ.ಆರ್.ಸಿ. ನಳಿನಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ಇಸಿಓ ಎಂ.ಹೆಚ್. ಹರೀಶ್, ಕಚೇರಿಯ ಸಿಬ್ಬಂದಿ ಹಾಜರಿದ್ದರು.