ಸಿದ್ದಾಪುರ, ಜೂ. ೨೨: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ತಹಶೀಲ್ದಾರ್ ಡಾ. ಯೋಗಾನಂದ ಗ್ರಾ.ಪಂ.ಗೆ ಸೂಚನೆ ನೀಡಿದರು.

ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಗ್ರಾ.ಪಂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಿದ್ದಾಪುರ ವ್ಯಾಪ್ತಿಯಲ್ಲಿ ಪ್ರತಿದಿನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಗುಂಪುಗೂಡುವಿಕೆಯನ್ನು ತಡೆಯಲು ಪಟ್ಟಣಕ್ಕೆ ವಾಹನ ಬಿಡದಂತೆ ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಯಿಂದ ಅನುಮತಿ ಪಡೆದ ವ್ಯಾಪಾರಿಗಳು ತರಕಾರಿ ಅಂಗಡಿಗಳನ್ನು ಅಂತರ ಕಾಯ್ದುಕೊಂಡು ಬಸ್ ನಿಲ್ದಾಣ ಹೊರತುಪಡಿಸಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಬೇಕು. ಸೋಂಕು ಕಡಿಮೆಯಾಗುವವರೆಗೂ ಹೊರ ಜಿಲ್ಲೆಯ ಯಾವುದೇ ವ್ಯಾಪಾರಿಗಳಿಗೆ ಸಿದ್ದಾಪುರದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಬಾರದು ಎಂದು ನಿರ್ದೇಶನ ನೀಡಿದರು. ಪಟ್ಟಣದಲ್ಲಿ ಯಾವುದೇ ವಾಹನಕ್ಕೆ ಪಾರ್ಕಿಂಗ್ ಅವಕಾಶ ನೀಡಬಾರದು. ಆಯಾ ರಸ್ತೆಯಲ್ಲಿ ಜಾಗ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಠಾಣಾಧಿಕಾರಿ ಮೋಹನ್ ರಾಜ್ ಅವರಿಗೆ ನಿರ್ದೇಶನ ನೀಡಿದರು.

ಪಾಸಿಟಿವ್ ಇರುವ ರೋಗಿಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕು. ಹೋಮ್ ಕ್ವಾರಂಟೈನ್‌ನಲ್ಲಿ ಇರುವವರು ಮನೆಯಿಂದ ಹೊರಗೆ ಸುತ್ತಾಡುತ್ತಿದ್ದರೆ ಅವರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ದೂರು ದಾಖಲು ಮಾಡುವಂತೆ ಸೂಚನೆ ನೀಡಲಾಯಿತು. ಸದಸ್ಯ ಸಾಹಿನುಲ್ಲ ಮಾತನಾಡಿ, ಅಂಗಡಿ ತೆರೆದಿರುವ ದಿನಗಳಲ್ಲಿ ಜನರ ನಿಯಂತ್ರಣ ಆಗುತ್ತಿಲ್ಲ. ಪಾಸಿಟಿವ್ ಇರುವವರೂ ಕೂಡ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಟಾಸ್ಕ್ ಫೋರ್ಸ್ ಸಮಿತಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಪ್ರತಿಯೊಬ್ಬರನ್ನೂ ರ‍್ಯಾಪಿಡ್ ಟೆಸ್ಟ್ ಮಾಡಬೇಕು. ಹಾಗೂ ಪಟ್ಟಣದ ವ್ಯಾಪ್ತಿಯ ೧೮ ವರ್ಷದ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಬೇಕೆಂದು ಆರೋಗ್ಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರಿಗೆ ಸೂಚಿಸಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಹೆಚ್ಚು ವಾಕ್ಸಿನ್ ಒದಗಿಸುವಂತೆ ಪತ್ರ ಬರೆಯಲು ತಿಳಿಸಿದರು. ಒಂದು ಪ್ರದೇಶದಲ್ಲಿ ೧೫ ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೆ ಆ ಭಾಗವನ್ನು ಸೀಲ್ ಡೌನ್ ಮಾಡಲಾಗುವುದು ಎಂದರು. ಸೋಂಕು ಇರುವ ಬಾಗದಲ್ಲಿ ಸ್ಯಾನಿಟೈಸ್ ಮಾಡುವಂತೆ ಸೂಚಿಸಿದ ಸಂದರ್ಭ ಸದಸ್ಯರಾದ ಪಳನಿ ಮಾತನಾಡಿ, ಈ ಬಗ್ಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿ.ಡಿ.ಓ. ಅವರಿಗೆ ಈ ಹಿಂದೆ ತಿಳಿಸಿದ ಸಂದರ್ಭ ಸ್ಯಾನಿಟೈಸ್ ಅಗತ್ಯವಿಲ್ಲ ಎಂದಿದ್ದರು ಎಂದು ಗಮನ ಸೆಳೆದರು. ಸೋಂಕಿತ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡುವಂತೆ ತಹಶೀಲ್ದಾರ್ ತಿಳಿಸಿದರು.

ಹೊರ ರಾಜ್ಯದಿಂದ ಕಾರ್ಮಿಕರು ಆಗಮಿಸುತ್ತಿದ್ದಲ್ಲಿ ಕಾರ್ಮಿಕರ ಪಟ್ಟಿಯನ್ನು ನೀಡಿ ಅನುಮತಿ ಪಡೆದುಕೊಳ್ಳಬೇಕು. ಹೊರ ರಾಜ್ಯದ ಕಾರ್ಮಿಕರಿಗೆ ಟೆಸ್ಟ್ ಕಡ್ಡಾಯವಾಗಿದ್ದು, ೧೪ ದಿನ ಕ್ವಾರಂಟೈನ್‌ನಲ್ಲಿ ಇರಬೇಕು. ಇದನ್ನು ಪಿ.ಡಿ.ಓ. ಖಚಿತಪಡಿಸಿ, ಅನುಮತಿ ನೀಡಬೇಕು ಎಂದರು. ಪ್ರತಿ ವಾಹನದಲ್ಲಿ ಶೇ.೫೦ ರಷ್ಟು ಮಾತ್ರ ಕಾರ್ಮಿಕರನ್ನು ಕರೆದುಕೊಂಡು ಹೋಗಬೇಕು. ಕಾನೂನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಪ್ರವಾಹ ಪೀಡಿತ ಪ್ರದೇಶವಾದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ೧೮ ವರ್ಷ ಮೇಲ್ಪಟ್ಟ ನೆರೆ ಸಂತ್ರಸ್ತರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ನೀಡಬೇಕು. ಹಳ್ಳಿಗಳಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಪಟ್ಟಣದಲ್ಲಿ ಅನಗತ್ಯವಾಗಿ ವಾಹನದಲ್ಲಿ ಓಡಾಡುವವರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಪಟ್ಟಣದಲ್ಲಿ ಯಾವುದೇ ವಾಹನ ಪಾರ್ಕಿಂಗ್ ಮಾಡದಂತೆ ಕ್ರಮ ಕೈಗೊಳ್ಳಬೇಕು. ಸೋಂಕು ತಡೆಗಟ್ಟಲು ೧೦ ದಿನಗಳ ಕಾಲ ಕಠಿಣ ನಿರ್ಧಾರಗಳು ಅಗತ್ಯವಿದ್ದು, ಜನರು ಸಹಕರಿಸಬೇಕೆಂದು ಮನವಿ ಮಾಡಿದರು. ತೀರಾ ಸಮಸ್ಯೆಯಲ್ಲಿದ್ದವರಿಗೆ ದಾನಿಗಳ ಮೂಲಕ ಕಿಟ್ ವಿತರಿಸಬಹುದು. ಸದಸ್ಯರು ಕೂಡ ಮುತುವರ್ಜಿ ವಹಿಸಬೇಕೆಂದರು.

ಪರಿಶೀಲನೆ : ಸಭೆಯ ಬಳಿಕ ಸಿದ್ದಾಪುರ ಪಟ್ಟಣದ ಎಂ.ಜಿ ರಸ್ತೆ, ಮಾರುಕಟ್ಟೆ ಭಾಗಕ್ಕೆ ತಹಶೀಲ್ದಾರ್ ಯೋಗಾನಂದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಮಾರುಕಟ್ಟೆಯ ನಿವಾಸಿ ಅಫ್ರೋಝ್ ಮಾತನಾಡಿ, ಮಾರುಕಟ್ಟೆ ಭಾಗದಲ್ಲಿ ಸೋಂಕು ಪ್ರಕರಣಗಳು ಹೆಚ್ಚಿದ್ದು, ಗ್ರಾ.ಪಂ ಯಾವುದೇ ಕ್ರಮ ಕೈಗೊಂಡಿಲ್ಲ. ಸೌಜನ್ಯಕ್ಕೂ ಕೂಡ ಬಂದು ಮಾತನಾಡಿಸಿಲ್ಲ. ಮಕ್ಕಳು, ಮಹಿಳೆಯರು ಮನೆಯಲ್ಲೇ ಇದ್ದು, ಆಹಾರಕ್ಕೂ ಕೂಡ ಸಮಸ್ಯೆಯಾಗಿತ್ತು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ಮಾರುಕಟ್ಟೆಯ ಒಳಭಾಗಕ್ಕೆ ಪ್ರವೇಶಿಸಿ, ಶುಚಿತ್ವವನ್ನು ಪರಿಶೀಲಿಸಿದರು. ಈ ಸಂದರ್ಭ ಅಲ್ಲಿನ ನಿವಾಸಿ ಪಾಪು ಮಾತನಾಡಿ, ಮಾರುಕಟ್ಟೆಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ದುರ್ನಾತ ಬೀರುತ್ತಿದೆ. ಕೊರೊನಾ ಸಂದರ್ಭ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಿ.ಡಿ.ಓ ವಿಶ್ವನಾಥ್ ಅವರಿಗೆ ಸೂಚಿಸಿದರು. ಬಳಿಕ ಬಸ್ ನಿಲ್ದಾಣ, ಪಟ್ಟಣದ ಪ್ರಮುಖ ಬೀದಿಗಳಿಗೆ ಭೇಟಿ ನೀಡಿ, ತರಕಾರಿ ಮಾರಾಟ, ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆಗೆ ಜಾಗ ನಿಗದಿಪಡಿಸಿದರು.

ಪತ್ರಕರ್ತರಿಗೆ ಸಭೆಗೆ ನಿರಾಕರಣೆ: ಟಾಸ್ಕ್ ಫೋರ್ಸ್ ಸಭೆಗೆ ಸಮಿತಿಯ ಸದಸ್ಯರು ಹೊರತುಪಡಿಸಿ ಪತ್ರಕರ್ತರು ಸಭೆಯಿಂದ ಹೊರಹೋಗಬೇಕೆಂದು ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ ತಿಳಿಸಿದರು. ಈ ಸಂದರ್ಭ ಸದಸ್ಯ ಶುಕೂರ್ ಕೂಡ ಪತ್ರಕರ್ತರು ಸಭೆಯಿಂದ ಹೊರಹೋಗಿ, ಸಭೆಯ ಮಾಹಿತಿ ಬಳಿಕ ನೀಡುತ್ತೇವೆ ಎಂದರು. ಇದು ಯಾವುದೇ ಖಾಸಗಿ ಸಭೆ ಅಲ್ಲ. ಕೋವಿಡ್ ನಿಯಂತ್ರಣ ಸಭೆಯಾಗಿದ್ದು, ಮಾಹಿತಿಯನ್ನು ಜನರಿಗೆ ತಲುಪಿಸುವುದು ಅವರ ಕರ್ತವ್ಯವಾಗಿದ್ದು, ಪತ್ರಕರ್ತರು ಸಭೆಯಲ್ಲಿ ಇರಬಹುದು ಎಂದು ತಹಶೀಲ್ದಾರ್ ಹೇಳಿದರು.

ಸಭೆಯಲ್ಲಿ ನೋಡಲ್ ಅಧಿಕಾರಿ ಶ್ರೀಧರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಆರೋಗ್ಯ ವೈದ್ಯಾಧಿಕಾರಿ ಡಾ.ರಾಘವೇಂದ್ರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಕಂದಾಯ ಪರಿವೀಕ್ಷಕರಾದ ಭಾನುಪ್ರಿಯ, ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್, ಪಿ.ಡಿ.ಓ. ವಿಶ್ವನಾಥ್ ಸೇರಿದಂತೆ ಇನ್ನಿತರರು ಇದ್ದರು.

_ ವಾಸು