ಸಿದ್ದಾಪುರ, ಜೂ. ೨೧: ಸಿದ್ದಾಪುರದ ಟಾಸ್ಕ್ಫೋರ್ಸ್ ಸಭೆಯು ಗೊಂದಲದಲ್ಲಿ ಮುಕ್ತಾಯಗೊಂಡಿರುವ ಪ್ರಸಂಗ ನಡೆಯಿತು. ಸಿದ್ದಾಪುರದ ಮಾರುಕಟ್ಟೆಯ ಭಾಗದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಮೋಹನ್ ಸಿದ್ದಾಪುರಕ್ಕೆ ಭೇಟಿ ನೀಡಿ ಆ ಭಾಗದಲ್ಲಿ ಸೀಲ್ಡೌನ್ ಮಾಡುವಂತೆ ಹಾಗೂ ನಿರ್ಬಂಧ ಪ್ರದೇಶವೆಂದು ಘೋಷಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ತುಳಸಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಾರುಕಟ್ಟೆ ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಆ ಭಾಗ ಹಾಗೂ ಎಂ.ಜಿ. ರಸ್ತೆಯ ಕೆಳಭಾಗ ಸೇರಿ ಒಟ್ಟು ೨೩೦ ಮನೆಗಳಿರುವ ಪ್ರದೇಶವನ್ನು ಒಂದು ವಾರಗಳ ಕಾಲ ಸೀಲ್ಡೌನ್ ಮಾಡುವಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪರ ಹಾಗೂ ವಿರೋಧ ವ್ಯಕ್ತವಾಯಿತು. ಅಲ್ಲದೇ ಈ ಎರಡು ಭಾಗದಲ್ಲಿ ಸೀಲ್ಡೌನ್ ಮಾಡಿದ್ದಲ್ಲಿ ಅಲ್ಲಿಯ ನಿವಾಸಿಗಳಿಗೆ ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಯಾವ ರೀತಿಯಲ್ಲಿ ಪೂರೈಕೆ ಮಾಡುವುದು ಎಂಬಿತ್ಯಾದಿ ಚರ್ಚೆಗಳು ನಡೆಯಿತು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ತುಳಸಿ ಮಾತನಾಡಿ, ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಕೆಳಭಾಗದಲ್ಲಿ ಕೂಡ ಸೀಲ್ಡೌನ್ ಮಾಡುವ ಮೂಲಕ ಸಿದ್ದಾಪುರದ ಪಟ್ಟಣದಲ್ಲಿರುವ ಎಲ್ಲಾ ವಾಣಿಜ್ಯ ಅಂಗಡಿಗಳನ್ನು ಎರಡು ದಿನಗಳವರೆಗೆ ಸಂಪೂರ್ಣ ಬಂದ್ ಮಾಡಿದರೆ ಕೊರೊನಾ ಸೋಂಕು ಹರಡದಂತೆ ನಿಯಂತ್ರಣಕ್ಕೆ ತರಬಹುದೆಂದು ತಿಳಿಸಿದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಅಗತ್ಯ ವಸ್ತುಗಳ ಅಂಗಡಿಗಳನ್ನು ಮುಚ್ಚಿದ್ದಲ್ಲಿ ಸಿದ್ದಾಪುರದ ನಿವಾಸಿಗಳು ಸಮೀಪದ ಊರಿಗೆ ಹೋಗಿ ಖರೀದಿಸುವಂತ ಪರಿಸ್ಥಿತಿ ನಿರ್ಮಾಣವಾಗಿ ಸಮಸ್ಯೆಯಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಿಡಿಓ ವಿಶ್ವನಾಥ್ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ನಿರ್ಬಂಧಿತ ಪ್ರದೇಶಗಳಿಗೆ ಹಾಲು ಹಾಗೂ ಅಗತ್ಯ ವಸ್ತುಗಳನ್ನು ನಿರ್ಬಂಧಿತ ಪ್ರದೇಶದ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಟಾಸ್ಕ್ಫೋರ್ಸ್ ಸಮಿತಿಯ ಮೂಲಕ ಕಲ್ಪಿಸುವಂತೆ ಸಲಹೆ ನೀಡಿದರು.
ಗ್ರಾ.ಪಂ. ಸದಸ್ಯ ಜಾಫರ್ ಆಲಿ ಮಾತನಾಡಿ, ಕೊರೊನಾ ಸೋಂಕು ಪತ್ತೆಯಾದ ಭಾಗದ ಮಾರುಕಟ್ಟೆಯ ಭಾಗವನ್ನು ಮಾತ್ರ ನಿರ್ಬಂಧಿತ ಪ್ರದೇಶವಾಗಿ ಮಾಡಬೇಕು ಹೊರತು ಬಸ್ ನಿಲ್ದಾಣವನ್ನು ಸೇರಿಸದಂತೆ ಹಾಗೂ ವಾಣಿಜ್ಯ ವ್ಯಾಪಾರಿಗಳಿಗೆ ಸಮಸ್ಯೆ ಆಗದ ರೀತಿಯಲ್ಲಿ ಸೀಲ್ಡೌನ್ ಮಾಡಬೇಕೆಂದು ಸಲಹೆ ನೀಡಿದರು. ಸಿದ್ದಾಪುರದ ಠಾಣಾಧಿಕಾರಿ ಮೋಹನ್ ರಾಜ್ ಮಾತನಾಡಿ, ಮಾರುಕಟ್ಟೆ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಹೆಚ್ಓ ಸೀಲ್ಡೌನ್ ಮಾಡಲು ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಿರ್ಬಂಧಿತ ಪ್ರದೇಶ ಘೋಷಿಸಿದ್ದಲ್ಲಿ ಆ ಜಾಗದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ಸಿದ್ದರಿದ್ದೇವೆ ಎಂದರು.
ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಹಾಗೂ ಸೀಲ್ಡೌನ್ ಮಾಡಲು ನಿರ್ಧಾರ ತೆಗೆದುಕೊಳ್ಳಬೇಕಾದ ಟಾಸ್ಕ್ಫೋರ್ಸ್ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದೇ ಎರಡು ಗಂಟೆ ಕಾಲ ನಡೆದ ಚರ್ಚೆ ಗೊಂದಲಮಯವಾಗಿತ್ತು. ಅರ್ಥಹೀನ ಸಭೆಯಾಗಿ ಮುಕ್ತಾಯವಾಯಿತ್ತ. ಸಭೆಯಲ್ಲಿ ಸಿದ್ದಾಪುರ ವೈದ್ಯಾಧಿಕಾರಿ ಡಾ. ರಾಘವೇಂದ್ರ ಹಾಜರಿದ್ದರು.
ಇಂದು ಮತ್ತೆ ಸಭೆ : ಸೋಮವಾರದಂದು ಟಾಸ್ಕ್ಫೋರ್ಸ್ ಸಭೆಯಲ್ಲಿ ಸೀಲ್ಡೌನ್ ಮಾಡುವ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ಬಾರದ ಹಿನ್ನೆಲೆಯಲ್ಲಿ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಸಮ್ಮುಖದಲ್ಲಿ ತಾ. ೨೨ ರಂದು (ಇಂದು) ಸಭೆ ನಡೆಯಲಿದೆಂದು ತಿಳಿದು ಬಂದಿದೆ.
- ವಾಸು