*ವೀರಾಜಪೇಟೆ, ಜೂ. ೨೦: ವೀರಾಜಪೇಟೆ ತಾಲೂಕಿನ ನಾಲಡಿ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಕಾಫಿ, ಬಾಳೆ, ಏಲಕ್ಕಿ ಗಿಡಗಳು ನಾಶವಾಗಿವೆ. ಪರದಂಡ ವಿಠಲ ಭೀಮಯ್ಯ ಅವರ ತೋಟ ಮತ್ತು ಗೌತಮ್ ಅವರ ತೋಟದಲ್ಲಿ ಕಾಫಿ ಗಿಡಗಳು ಹಾಗೂ ಸಾವಿರಾರು ರೂಪಾಯಿ ಬೆಲೆ ಬಾಳುವ ಬಾಳೆ ಗಿಡಗಳನ್ನು ಕಾಡಾನೆಗಳು ನಾಶಪಡಿಸಿವೆ.

ಹನ್ನೊಂದು ಕಾಡಾನೆ ಹಿಂಡು ತೋಟವನ್ನು ನಾಶಪಡಿಸಿವೆ ಎಂದು ತೋಟದ ಮಾಲೀಕ ವಿಠಲ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ಹಾವಳಿಯಿಂದ ಕಾಫಿ ಗಿಡಗಳು ಮಾತ್ರವಲ್ಲ ಕೆಲಸಗಾರರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಡು ಹಂದಿಗಳು ಕೂಡ ಹಾಕಿದ ಗೊಬ್ಬರವನ್ನು ಎಳೆದು ಹಾಕುತ್ತವೆ. ಅರಣ್ಯ ಇಲಾಖೆಯಿಂದ ಸೂಕ್ತ ಸ್ಪಂದನ ದೊರೆಯುತ್ತಿಲ್ಲ ಎಂದು ನಾಲಡಿ ಗ್ರಾಮ ಪಂಚಾಯಿತಿ ಅಧÀ್ಯಕ್ಷ ಸಂಪನ್ ತಿಳಿಸಿದ್ದಾರೆ. ಕಾಡಾನೆ ಹಾವಳಿ ತಡೆಗೆ ಕ್ರಮಕೈಗೊಳ್ಳದಿದ್ದಲ್ಲಿ ಅರಣ್ಯ ಇಲಾಖೆಯ ಕಚೇರಿಯ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾ.ಪಂ. ಸದಸ್ಯ ಕೊಡಿಮಣಿಯಂಡ ಬೋಪಣ್ಣ ಎಚ್ಚರಿಕೆ ನೀಡಿದ್ದಾರೆ. ಹಾನಿಯಾದ ತೋಟಕ್ಕೆ ಅರಣ್ಯ ಅಧಿಕಾರಿಗಳು ಇದುವರೆಗೆ ಭೇಟಿ ನೀಡಿಲ್ಲ. ತಕ್ಷಣ ಅರಣ್ಯ ಇಲಾಖೆಯು ಕಾಡಾನೆ ಹಿಂಡನ್ನು ಕಾಡಿಗಟ್ಟಲು ಕ್ರಮವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.