ಮಡಿಕೇರಿ, ಜೂ. ೧೭: ನಗರದ ಅರವಿಂದ್ ಮೋಟರ‍್ಸ್ ಎದುರಿನ ನಾಲ್ಕು ಅಂಗಡಿಗಳಿಗೆ ಇಂದು ಮಳೆ ಹಿನ್ನೆಲೆ ನೀರು ತುಂಬಿ ಹಾನಿ ಉಂಟಾಗಿದೆ. ಮಾತ್ರವಲ್ಲದೇ ಇದೇ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ಎದುರಿನ ತೋಡು ಕೂಡ ಬ್ಲಾಕ್ ಆಗಿ ರಸ್ತೆಯಲ್ಲಿ ನೀರು ತುಂಬಿ ಹರಿದಿದ್ದು, ಈ ವಿಚಾರವಾಗಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಹಾಗೂ ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.

ಇಂದು ಬೆಳಿಗ್ಗೆ ಅಲ್ಲಿನ ನಾಲ್ಕು ಅಂಗಡಿಗಳ ಹಿಂಭಾಗ ತೋಡು, ಮಳೆ ಹಿನ್ನೆಲೆಯಲ್ಲಿ ಬ್ಲಾಕ್ ಆದ ಕಾರಣ ಅಂಗಡಿಗಳ ಒಳಭಾಗಕ್ಕೆ ನೀರು ತುಂಬಿಕೊAಡಿದೆ. ಇದೇ ವೇಳೆ ಇಂದಿರಾ ಕ್ಯಾಂಟೀನ್ ಎದುರಿನಲ್ಲೂ ತೋಡು ತುಂಬಿಕೊAಡು ಅವಾಂತರ ಸೃಷ್ಟಿಯಾಗಿದೆ. ಈ ಸಂದರ್ಭ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಹಾಗೂ ಅವರ ತಂಡ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. ನಗರಸಭಾ ಆಯುಕ್ತ ರಾಮದಾಸ್ ಅವರೂ ಭೇಟಿ ನೀಡಿ ಪರಿಶೀಲಿಸಿದ್ದರು. ಇದಾದ ನಂತರ ಮಧ್ಯಾಹ್ನ ಬಳಿಕ ಈ ಭಾಗದಲ್ಲಿ ನೀರು ಮತ್ತೊಮ್ಮೆ ಬ್ಲಾಕ್ ಆಗಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ಸಂದರ್ಭ ಜೆಸಿಬಿ ನೀಡುವಂತೆ ಅರುಣ್ ಶೆಟ್ಟಿ ಸ್ಥಳಕ್ಕೆ ಬಂದಿದ್ದ ನಗರಸಭೆಯ ಅಧಿಕಾರಿಗಳ ಬಳಿ ಒತ್ತಾಯಿಸಿದರು. ಈ ವೇಳೆ ಎಇಇ ರಾಜೇಂದ್ರ ಕುಮಾರ್ ಅವರು ಅರುಣ್ ಶೆಟ್ಟಿ ಅವರನ್ನು ಕುರಿತು ಏಕವಚನ ಪ್ರಯೋಗ ಮಾಡಿದ್ದರಿಂದ ಅರುಣ್ ಶೆಟ್ಟಿ ಹಾಗೂ ರಾಜೇಂದ್ರ ಕುಮಾರ್ ನಡುವೆ ತೀವ್ರ ಜಟಾಪಟಿ ನಡೆಯಿತು. ಕೊನೆಗೆ ಸ್ಥಳಕ್ಕೆ ಮತ್ತೊಮ್ಮೆ ಆಯುಕ್ತ ರಾಮದಾಸ್ ಅವರು ಆಗಮಿಸಿದ ವೇಳೆ ಎಇಇ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರುಣ್ ಶೆಟ್ಟಿ, ನಗರಸಭೆಗೆ ಸ್ವಂತ ಜೆಸಿಬಿ ಇಲ್ಲ. ಈ ಬಗ್ಗೆ ಗಮನಹರಿಸುವಂತೆ ತಾನು ಈ ಹಿಂದೆಯೇ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಸಮಸ್ಯೆ ಎದುರಾದಾಗಲೂ ಜೆಸಿಬಿ ದೊರೆತಿಲ್ಲ. ಇನ್ನಾದರೂ ಈ ಬಗ್ಗೆ ಜಾಗೃತರಾಗುವಂತೆ ರಾಮದಾಸ್ ಅವರಲ್ಲಿ ಮನವಿ ಮಾಡಿದರು.

ಓರ್ವ ನಗರಸಭಾ ಸದಸ್ಯ ಎಂಬ ಗೌರವವನ್ನೂ ಕೊಡದೆ ಅವಮಾನಿಸಿದ ಎಇಇ ನಡೆಯನ್ನು ತಾನು ಖಂಡಿಸುತ್ತೇನೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಮಾಧ್ಯಮಕ್ಕೆ ಅರುಣ್ ಶೆಟ್ಟಿ ತಿಳಿಸಿದರು.