ಸೋಮವಾರಪೇಟೆ,ಜೂ.೧೬: ವಿದ್ಯುತ್ ತಂತಿ ತುಂಡಾಗಿ ರಸ್ತೆ ಬದಿಯಲ್ಲಿ ಮೇಯುತ್ತಿದ್ದ ೨ ಜಾನುವಾರುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹರಗ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದೆ.
ಹರಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಪ್ರಮುಖ ವಿದ್ಯುತ್ ಮಾರ್ಗಕ್ಕೆ ಅಳವಡಿಸಿದ್ದ ತಂತಿ ತುಂಡಾಗಿ ಬಿದ್ದು ವಿದ್ಯುತ್ ಪ್ರವಹಿಸಿದ ಹಿನ್ನೆಲೆ ಗ್ರಾಮದ ಹೆಚ್.ಈ. ಕಾರ್ಯಪ್ಪ ಅವರಿಗೆ ಸೇರಿದ ಉಳುಮೆ ಎತ್ತು, ಹೆಚ್.ಇ. ದೇವರಾಜು ಅವರಿಗೆ ಸೇರಿದ ಹಸು ಸಾವನ್ನಪ್ಪಿದೆ.
ಹರಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಮಾರ್ಗ ಹಳೆಯದಾಗಿದ್ದು, ಇಂದಿಗೂ ಕಂಬಗಳಿಗೆ ಪಿಂಗಾಣಿಗಳನ್ನು ಅಳವಡಿಸಿ ಮಾರ್ಗ ಎಳೆಯಲಾಗಿದೆ. ಈ ಭಾಗದಲ್ಲಿ ಮಳೆ-ಗಾಳಿ ಜೋರಾಗಿದ್ದು, ಓಬಿರಾಯನ ಕಾಲದಲ್ಲಿ ಅಳವಡಿಸಿರುವ ತಂತಿಯನ್ನು ಬದಲಾಯಿಸುವಂತೆ ಅನೇಕ ವರ್ಷಗಳಿಂದ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಾನುವಾರುಗಳು ಬಲಿಯಾಗಿದ್ದು, ಇದರ ನೇರ ಹೊಣೆಯನ್ನು ವಿದ್ಯುತ್ ಇಲಾಖೆ ಹೊರಬೇಕಿದೆ ಎಂದು ಗ್ರಾ.ಪಂ. ಸದಸ್ಯ ತ್ರಿಶೂಲ್ ಆಗ್ರಹಿಸಿದ್ದಾರೆ.