ಮಡಿಕೇರಿ, ಜೂ. ೧೬: ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ. ೬ ಲಕ್ಷ ಮೌಲ್ಯದ ಬೀಟೆ ಮರ ಸಂಗ್ರಹವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಮರ ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ.

ವೀರಾಜಪೇಟೆ ಅರಣ್ಯ ವಲಯದ ಚೆಯ್ಯಂಡಾಣೆ ಶಾಖೆ ವ್ಯಾಪ್ತಿಯ ಮರಂದೋಡ ಗ್ರಾಮದ ಚೋಯಮಾಡಂಡ ಕೆ. ಪೂಣಚ್ಚ ಮತ್ತು ಕುಟುಂಬಸ್ಥರಿಗೆ ಸೇರಿದ ಕಾಫಿ ತೋಟದ ಜಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಬೀಟೆ ಮರದ ನಾಟಾಗಳನ್ನು ಪತ್ತೆಹಚ್ಚಲಾಗಿದೆ. ವೀರಾಜಪೇಟೆ ಅರಣ್ಯ ವಲಯದ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಂದಾಜು ೬ ಲಕ್ಷ ರೂ. ಮೌಲ್ಯದ ಬೀಟೆ ಮರದ ನಾಟಾಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಕುಂಜಿಲ ಗ್ರಾಮದ ಜುಬೇರ್, ಅಲಿಯಾಸ್ ಆಪು, ನಜೀರ, ಮಜೀದ್ ಮಕ್ಕಿ ಅಲಿಯಾಸ್ ಪುಂಗ, ರಿಜ್ವಾನ್ ಹಾಗೂ ಚೆರಿಯಪರಂಬು ಸಾದಲಿ ಅಲಿಯಾಸ್ ಚಾಬು ಹಾಗೂ ಇತರ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೈ.ಚಕ್ರಪಾಣಿ ಮತ್ತು ವೀರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರೋಷಿಣಿ ಎ.ಜೆ. ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ಎಂ. ದೇವಯ್ಯ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ಚಂದ್ರಹಾಸ ಪಟಗಾರ, ಟಿ.ಎನ್. ಪ್ರಶಾಂತ್ ಕುಮಾರ್, ನಾಗರಾಜ ರಡರಟ್ಟಿ, ಚಂದ್ರಶೇಖರ ಅಮರಗೋಳ ಹಾಗೂ ವಾಹನ ಚಾಲಕರಾದ ಅಶೋಕ, ಕೆ.ಆರ್. ಅಚ್ಚಯ್ಯ, ಮಧು ಹಾಗೂ ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.