ಕಣಿವೆ, ಜೂ. ೧೬: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಸೇರಿದಂತೆ ಅರಣ್ಯದಂಚಿನ ಗ್ರಾಮಗಳ ಜನ ಸಮುದಾಯವನ್ನು ಕಾಡಾನೆಗಳ ಹಿಂಡು ತಲ್ಲಣ ಗೊಳಿಸುತ್ತಿರುವುದು ಪ್ರಸ್ತುತದ ಬಹು ದೊಡ್ಡ ಸಮಸ್ಯೆ. ಆನೆಗಳ ಸಂತತಿ ಹೆಚ್ಚಿದೆಯೋ, ಇಲ್ಲ ಆನೆಗಳ ಹಾವಳಿ ಹೆಚ್ಚಾಗಿದೆಯೋ ಎಂಬುದು ಕೊಡಗಿನ ಜನರಲ್ಲಿರುವ ಯಕ್ಷ ಪ್ರಶ್ನೆ.

ಕಾಡಾನೆಗಳ ಹಾವಳಿ ಹಿಂದೆಯೂ ಇತ್ತು. ಈಗಲೂ ಇದೆ. ಆದರೆ, ಹಿಂದೆ ಕೇವಲ ಭತ್ತದ ಬೆಳೆಯ ಸಂದರ್ಭದಲ್ಲಿ ಮಾತ್ರ ಇತ್ತು. ಅಂದರೆ ಕಾಡಿನಲ್ಲಿ ಆಹಾರ ಕಡಿಮೆಯಾದರೆ ಅಥವಾ ಆನೆಗಳಿಗೂ ಆಹಾರದಲ್ಲಿ ಬದಲಾವಣೆ ಬೇಕಾದಲ್ಲಿ ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.

ಆದರೆ ಈಗಿನ ಸ್ಥಿತಿಯನ್ನು ವಿಶ್ಲೇಷಿಸಿದರೆ ಸರ್ವ ಋತುವಿನಲ್ಲೂ ಕಾಡಾನೆಗಳ ಹಾವಳಿಯ ಹಾಹಾಕಾರಗಳು ಕೇಳಿಬರುತ್ತಲೇ ಇವೆಯಲ್ಲ....! ಬೇಸಿಗೆಯ ಬೆಂಗಾಡಿನ ದಿನಗಳಲ್ಲಿ ಒಣಗಿ ನಿಂತ ದಟ್ಟಾರಣ್ಯಗಳಲ್ಲಿ ಹಸಿರು ಸೊಪ್ಪು, ಆಹಾರ ಮತ್ತು ನೀರನ್ನು ಅರಸಿ ಕಾಡಾನೆಗಳ ಹಿಂಡು ನಾಡಿಗೆ ಧಾವಿಸುವುದು ಸಾಮಾನ್ಯ.

ಆದರೆ, ವರುಣನ ಕೃಪೆಯಿಂದ ಉತ್ತಮ ಮಳೆ ಸುರಿದು ಇಡೀ ಅರಣ್ಯ ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿರುವAತಹ ಈ ದಿನಗಳಲ್ಲೂ ಕಾಡಾನೆಗಳ ಹಿಂಡು ತಂಡೋಪತAಡವಾಗಿ ನಾಡಿನತ್ತ ಮುಖ ಮಾಡುತ್ತಿರುವುದೇಕೆ ?

ಈ ಪ್ರಶ್ನೆಯನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮನದಟ್ಟುಮಾಡಿಕೊಳ್ಳಬೇಕಿದೆ.

ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಬರತೊಡಗಿವೆ. ಕಾರಣ, ಕಾಡಿನಲ್ಲಿ ಸಿಗಬೇಕಿರುವುದು ಇದೀಗ ಸಿಗುತ್ತಿಲ್ಲ ಎಂಬ ಅಂಶವನ್ನು ಈ ಬಹಳ ಹಿಂದೆಯೇ ಯೋಚಿಸಬೇಕಿತ್ತು. ಆದರೆ ಯಾರೂ ಕೂಡ ಯೋಚಿಸಲೂ ಇಲ್ಲ. ಒಂದೊಮ್ಮೆ ಯೋಚಿಸಿದವರು ಕಾರ್ಯರೂಪಕ್ಕೆ ತಂದಿರಲಿಲ್ಲ. ಅಷ್ಟೇ ಅಲ್ಲ ಇಷ್ಟೆಲ್ಲಾ ಹಾವಳಿ ಆಗುತ್ತಿದ್ದರೂ ಈಗಲೂ ಯೋಚಿಸುತ್ತಿಲ್ಲ ಎಂಬುದು ವಿಷಾದನೀಯ.

ಕಾಫಿ ಬೆಲೆ ಎಂಬ ಮರೀಚಿಕೆಯ ಬೆನ್ನು ಹತ್ತಿದ ಕೊಡಗಿನ ಅನೇಕ ಮಂದಿ ಕಂದಾಯ ಇಲಾಖೆಯಲ್ಲಿ ತಮಗೆ ಸೇರಿದ್ದೆಂದು ನಮೂದಾದ ಪ್ರತಿ ಇಂಚು ಭೂಮಿಯನ್ನು ಉತ್ಸಾಹದಿಂದ ಆವರಿಸಿಕೊಂಡರು. ಆವರಿಸಿಕೊಂಡ ಜಾಗದಲ್ಲಿನ ಕಾಡು ಕಡಿದು ಕಾಫಿಯ ನಾಡಾಗಿ ಪರಿವರ್ತಿಸಿದರು. ಆ ನಡುವೆ "ಶುಂಠಿ" ಎಂಬ ಸುಂದರ ಹೆಸರು ಕೊಡಗಿನಾದ್ಯಂತ ರಾರಾಜಿಸಿದಾಗ ಕೊಡಗಿನ ಸಾಕಷ್ಟು ಮಂದಿ ತಮ್ಮಲ್ಲಿನ ಅಳಿದುಳಿದ ಕಾಡು ಜಾಗವನ್ನೆಲ್ಲಾ ಶುಂಠಿ ಬೆಳೆಯಲು ಕರೆ ನೀಡಿ ಮಣ್ಣಿನಲ್ಲಿ ಹೊನ್ನು ಬೆಳೆಯುವ ಭರದಲ್ಲಿ ಅಲ್ಲಿದ್ದ ಮರಗಿಡಗಳು ಮಾಯವಾದವು.

ಕಾಡಾನೆಗಳು ನಾಡಿಗೆ ಬಂದಾಗ ಅವುಗಳನ್ನು ಮರಳಿಸಲು ಕಾಡೇ ಇಲ್ಲ...! ಅರಣ್ಯ ಇಲಾಖೆ ತನಗೆ ಲಾಭ ತರುವ ಗಿಡ ಮರಗಳನ್ನು ಮಾತ್ರ ನೆಟ್ಟು ಬೆಳೆಸಿದ ಬಂಜರು ಕಾಡು ಮಾತ್ರ ಇದೆ. ಅಲ್ಲಿ ಆನೆಗಳಿಗೆ ಬೇಕಾದ ಆಹಾರ ಹುಡುಕಿದರೂ ಸಿಗುತ್ತಿಲ್ಲ.

‘ಮೀಸಲು ಅರಣ್ಯ' ಎಂಬ ಫಲಕಗಳು ಒಂದು ವೇಳೆ ಇಲ್ಲದಿದ್ದಲ್ಲಿ ಅರಣ್ಯ ಹೇಗಿರುತ್ತೆ ಎಂದು ನೋಡಲು "ಖಂಡಾಲಾ" ಕ್ಕೆ ಹೋಗಬೇಕಾಗಿತ್ತೇನೋ ಏನೋ...?

ಕಾಡಿನಲ್ಲಿ ಕಾಡಾನೆಗಳು ತಿನ್ನಲು ಆಹಾರ ಇಲ್ಲದ ಕಾರಣ ಬಹಳಷ್ಟು ಮಂದಿ ಕಾಡಂಚಿನ ಕೃಷಿಕರು ತಾವು ಬೆಳೆದ ಫಸಲನ್ನು ಪರೋಕ್ಷವಾಗಿ ಕಾಡಾನೆಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.

ಕೊಡಗಿನ ಮಂದಿ ಆನೆ ಹತ್ಯೆಯಂತಹ ಕೃತ್ಯಗಳಿಗೆ ಇಳಿದಿಲ್ಲ. ಇಳಿಯಲೂ ಬಾರದು. ಆದರೆ ಕೆಲವೊಂದೆಡೆ ಆನೆಗಳು ಸಂಶಯಾ ಸ್ಪದವಾಗಿ ಸಾವಿಗೀಡಾಗುತ್ತಿವೆ.

ಈ ವಿಷಯದ ಬಗ್ಗೆ ಸಂಬAಧಿಸಿದವರು ಗಂಭೀರ ಚಿಂತನೆ ನಡೆಸುವ ಕಾಲ ಇದಾಗಿದೆ. ಆನೆಗಳು ನಾಡಿಗೆ ಬರದಂತೆ ಏನು ಮಾಡಬೇಕು ಎಂಬುದು ಪ್ರಸ್ತುತದ ಅನಿವಾರ್ಯತೆ.

ಈಗಾಗಲೇ ಕಾಡಾನೆಗಳಿಗೆ ಜಿಲ್ಲೆಯ ಕೆಲವು ಮಂದಿ ಬಲಿಯಾಗಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಇದೀಗ ಮಾಡಬೇಕಾಗಿ ರುವುದು ವನ್ಯ ಪ್ರಾಣಿಗಳನ್ನು ರಕ್ಷಿಸಿ ಎಂಬುದಲ್ಲ.

ವನ್ಯ ಪ್ರಾಣಿಗಳಿಂದ ಕೊಡಗಿನ ಮಂದಿ ಹಾಗೂ ಮಂದಿ ಬೆಳೆದ ಫಸಲು ರಕ್ಷಿಸಿ ಎಂಬುದಾಗಿದೆ.

ಆನೆಗಳ ಸಂತಸ - ಸಂಕಟ

ಕಾಡಿನಿಂದ ಸಂಕಟಪಟ್ಟು ನಾಡಿಗೆ ಬಂದು ಸಂತಸದಿAದ ಫಸಲು ತಿಂದು ಒಂದಿಷ್ಟು ಹಸಿವು ನೀಗಿಸಿಕೊಂಡ ಅದೇ ಹಿಂಡನ್ನು ಕಾಡಿಗಟ್ಟುವಾಗ ಅವುಗಳಿಗೆ ಕೊಡುವ ಕಾಟ ಇದೆಯಲ್ಲಾ, ಅತ್ತಿಂದಿತ್ತ - ಇತ್ತಿಂದತ್ತ ಅಟ್ಟಾಡಿಸಿ ಕಾಡಿಗೆ ಮರಳಿಸುವಾಗ ಕಾಡಾನೆಗಳು ಪಡುವ ಸಂಕಟ ಅಷ್ಟಿಷ್ಟಲ್ಲ.

ಅರಣ್ಯದೊಳಗೆ ಕಾಡಾನೆಗಳಿಗೆ ಅಗತ್ಯವಿರುವ ಆಹಾರದ ಗಿಡ - ಮರಗಳ ತೊಗಟೆ, ಸೊಪ್ಪು - ಸೆದೆಗಳು ಇದ್ದು, ಅಲ್ಲಲ್ಲಿ ಕುಡಿಯುವ ನೀರಿನ ಕೆರೆ ಕಟ್ಟೆಗಳು ಇದ್ದರೆ ಏಕೆ ನಾಡಿಗೆ ಬರುತ್ತಿದ್ದವು? ಸ್ವಾಭಾವಿಕವಾಗಿ ಬೆಳೆದಿದ್ದ ಕಾಡಾನೆಗಳ ಅತೀ ಪ್ರಿಯವಾದ ಬಿದಿರು ಮರಗಳು ಕುಟ್ಟೆ ರೋಗ ಬಂದು ನಾಶವಾದ ನಂತರ, ಅರಣ್ಯದೊಳಗೆ ಕಾಡಾನೆಗಳಿಗೆ ಬೇಕಾದ ಮೂಲ ಆಹಾರದ ಮರಗಳೇ ಇಲ್ಲದಿರುವುದು ದಶಕಗಳ ಹಿಂದಿ ನಿಂದಲೂ ಇಲಾಖೆಗೆ ಗೊತ್ತಿದ್ದೂ ಕೂಡ ಹತ್ತಿ, ಮಾವು, ಹಲಸು, ಬಿದಿರು ಮೊದಲಾದ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಯನ್ನು ಹಾಕದೇ ಕೇವಲ ಇಲಾಖೆಗೆ ಆದಾಯ ಬರುವಂತಹ ಪರಿಸರಕ್ಕೂ ಮಾರಕವಾಗುವಂತಹ ಕೆಲವೇ ಜಾತಿಯ ಮರಗಳನ್ನು ಬೆಳೆಯಲಾಗುತ್ತಿದೆ. ೪ ರಿಂದ ೫ ಸಾವಿರ ಕೆ.ಜಿ. ತೂಕದ ಒಂದು ಆನೆಗೆ ದಿನವೊಂದಕ್ಕೆ ೧೫೦ ರಿಂದ ೨೫೦ ಕೆ.ಜಿ.ಗಳಷ್ಟು ಪ್ರಮಾಣದ ಹುಲ್ಲು, ಮರದ ತೊಗಟೆ, ಸೊಪ್ಪು, ಬಿದಿರು ಮೊದಲಾದ ಆಹಾರ ಬೇಕು. ದಾಹ ನೀಗಿಸಲು ೮೦ ರಿಂದ ೯೦ ಲೀಟರ್‌ನಷ್ಟು ನೀರು ಬೇಕು.

ದಿನಕ್ಕೆ ೫ ರಿಂದ ೧೫ ಕಿ.ಮೀ. ಕ್ರಮಿಸುವ ಈ ಆನೆ ಗರ್ಭಧರಿಸುವ ಅವಧಿ ೨೨ ತಿಂಗಳು. ೩ ರಿಂದ ೨೫ ರವರೆಗೂ ತಂಡೋಪತAಡವಾಗಿ ಇರುವ ಈ ಕಾಡಾನೆಗಳ ಹಿಂಡಿಗೆ ಈಗ ಅರಣ್ಯದಲ್ಲಿ ಬೇಕಿರುವುದು ಆಹಾರ ಹಾಗೂ ನೀರು.

ಇದನ್ನು ಕಲ್ಪಿಸದೇ ಅರಣ್ಯದ ಸುತ್ತಲೂ ಕಂದಕ ತೆರೆದರೆ, ರೈಲ್ವೆ ಕಂಬಿ ಹಾಕಿದರೆ ಯಾವುದೇ ಪ್ರಯೋಜನ ಇಲ್ಲ. ಅವುಗಳಿಗೂ ನಮ್ಮಂತೆಯೇ ಹೊಟ್ಟೆ ಇದೆಯಲ್ಲಾ. ಹಸಿವಾದರೆ, ಬಾಯಾರಿಕೆ ಆದರೆ ಅವುಗಳು ಏನು ಮಾಡಿಯಾವು?

ವಿಶೇಷ ಲೇಖನ - ಕೆ.ಎಸ್. ಮೂರ್ತಿ, ಕುಶಾಲನಗರ.