ಗೋಣಿಕೊಪ್ಪಲು, ಜೂ. ೧೬: ಕೊರೊನಾ ಎರಡನೇ ಅಲೆಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಗಲು-ರಾತ್ರಿ ಎನ್ನದೇ ಮುಂಚೂಣಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಕಿರುಗೂರು, ನಲ್ಲೂರು, ಬೆಸಗೂರು ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ ನಾಲ್ಕು ಸಾವಿರದಂತೆ ಪ್ರೋತ್ಸಾಹ ಧನ ನೀಡುವ ಮೂಲಕ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘ ಮಾದರಿಯಾಗಿದೆ.

ಸಂಸ್ಥೆಯ ಅಧ್ಯಕ್ಷ ಆಲೆಮಾಡ ಸುಧೀರ್ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಿ, ಪ್ರೊತ್ಸಾಹ ಧನ ವಿತರಿಸಿದರು. ಗ್ರಾಮದಲ್ಲಿ ಕೊರೊನಾ ಮುಕ್ತ ಮಾಡಲು ಮತ್ತಷ್ಟು ಜಾಗ್ರತೆ ವಹಿಸುವಂತೆ ಕೋರಿದರು.

ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಪುಳ್ಳಂಗಡ ನಟೇಶ್, ತೀತರಮಾಡ ಕುಶಾಲಪ್ಪ, ಕಾಕಮಾಡ ಹರೀಶ್, ಹೆಚ್.ಎಂ. ಡಿಕ್ಕಿ, ಹೆಚ್.ಆರ್. ಗಣೇಶ್, ಮಲ್ಚಿರ ಬೋಪಣ್ಣ, ಎಂ.ಬಿ. ಅಶೋಕ್, ಕೋದೇಂಗಡ ಬಬಿತ, ಬಾಚಮಾಡ ಶಂಕರಿ, ತೀತರಮಾಡ ಸರಳ, ಚಟ್ಟಿಮಾಡ ರಾಬಿನ್, ಹೆಚ್.ಎಸ್. ಗಿರೀಶ್, ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.