ಶಾAತಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚಾಲನೆ
ಸೋಮವಾರಪೇಟೆ, ಜೂ. ೧೫: ಗ್ರಾಮೀಣ ಪ್ರದೇಶದಲ್ಲಿ ಹಲವಷ್ಟು ಕೃಷಿ ಭೂಮಿಯನ್ನು ಪಾಳು ಬಿಡಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ರೈತಾಪಿ ವರ್ಗ ಚಿಂತನೆ ಹರಿಸಬೇಕು.
ಹೈನುಗಾರಿಕೆಯಿಂದ ಕೃಷಿಕರು ಆರ್ಥಿಕ ಸಬಲತೆ ಸಾಧಿಸಲು ವಿಫುಲ ಅವಕಾಶವಿದ್ದು, ಇದನ್ನು ಬಳಸಿಕೊಳ್ಳಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಸಮೀಪದ ಶಾಂತಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಾಲು ಉತ್ಪಾದಕರ ಸಹಕಾರ ಸಂಘ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಚಟುವಟಿಕೆಯ ಅವಿಭಾಜ್ಯ ಅಂಗವಾಗಿ ಹೈನುಗಾರಿಕೆ ಯನ್ನು ಕೈಗೊಳ್ಳಬೇಕು.
ಶಾಂತಳ್ಳಿ ಯಂತಹ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಅವಕಾಶವಿದ್ದು, ರೈತಾಪಿ ವರ್ಗ ಇದನ್ನು ಆರ್ಥಿಕತೆಯ ಒಂದು ಭಾಗವಾಗಿ ಉಳಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು.
ಹಲವಷ್ಟು ಕೃಷಿ ಜಾಗಗಳು ಪಾಳು ಬಿದ್ದಿವೆ. ಇದರೊಂದಿಗೆ ಸರ್ಕಾರಿ ಗೋಮಾಳಗಳೂ ಇವೆ. ಹೈನುಗಾರಿಕೆ ಆದಾಯದ ಮೂಲವೂ ಆಗಿದ್ದು, ಸರ್ಕಾರವು ವಿವಿಧ ಯೋಜನೆಗಳ ಮೂಲಕ ಹೈನುಗಾರಿಕೆಗೆ ಒತ್ತು ನೀಡುತ್ತಿದೆ. ಕೃಷಿಕರು ಇದನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಹೇಮಂತ್ ಕುಮಾರ್ ಭಾಗವಹಿಸಿ ಮಾತನಾಡಿ, ರೈತರು ತಮ್ಮ ಹಸುಗಳ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರಲ್ಲದೆ, ಶಾಂತಳ್ಳಿಯಲ್ಲಿ ಜಾಗ ಗುರುತಿಸಿದರೆ ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ ೫ ಲಕ್ಷ ಅನುದಾನ ಒದಗಿಸುವದಾಗಿ ಭರವಸೆ ನೀಡಿದರು.
ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಅವರು ಮಾತನಾಡಿ, ಹಾಸನ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಶುಗಳಿಗೆ ನೀಡುವ ಪೌಷ್ಟಿಕಾಂಶ ಯುಕ್ತ ಆಹಾರ, ಉಚಿತ ತಪಾಸಣೆ, ಸಾಲ ಸೌಲಭ್ಯ, ಪ್ರೋತ್ಸಾಹ ಧನದ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಮುತ್ತಣ್ಣ ವಹಿಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕುಮಾರ ಲಿಂಗೇಶ್ವರ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ವಿಎಸ್ಎಸ್ಎನ್ ಅಧ್ಯಕ್ಷ ಬಿ.ಎ. ಧರ್ಮಪ್ಪ, ಆರ್ಎಂಸಿ ಸದಸ್ಯ ಕೆ.ಕೆ. ಗೋಪಾಲ್, ಪ್ರಮುಖರಾದ ಕೆ.ಕೆ. ಸುಬ್ಬಯ್ಯ, ಕೆ.ಎಸ್. ರಾಮಚಂದ್ರ, ಗ್ರಾ.ಪಂ. ಅಧ್ಯಕ್ಷರುಗಳಾದ ಸವಿತ, ರಮ್ಯ, ಕಾರ್ಯದರ್ಶಿ ಮಧು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.