ಕುಶಾಲನಗರ, ಜೂ. ೧೫: ಅಕ್ರಮವಾಗಿ ಬೀಟೆ ಮರ ಕಡಿದು ಸಂಗ್ರಹಿಸಿದ ಪ್ರಕರಣವೊಂದನ್ನು ಕುಶಾಲನಗರ ಅರಣ್ಯ ಇಲಾಖೆಯ ಅಧಿಕಾರಿಗಳು ಸಮೀಪದ ವಾಲ್ನೂರು-ತ್ಯಾಗತ್ತೂರು ಬಳಿ ಮನೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ.
ಅಲ್ಲಿನ ನಿವಾಸಿ ಸಿದ್ದಿಕ್ ಮತ್ತು ಇಬ್ರಾಹಿಂ ಎಂಬುವವರ ಮನೆಯಲ್ಲಿ ಅಂದಾಜು ೨.೫ ಲಕ್ಷ ರೂ. ಮೌಲ್ಯದ ೧೫ ಬೀಟೆ ನಾಟಾಗಳು ಪತ್ತೆಯಾಗಿವೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮಾಹಿತಿ ನೀಡಿದ್ದಾರೆ.ದಾಳಿ ಮಾಡಿದ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದ ಅವರು ಈ ಬಗ್ಗೆ ಮೊಕದ್ದಮೆ ದಾಖಲಿಸಿ ಮರಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೀನುಕೊಲ್ಲಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ, ಸಿಬ್ಬಂದಿ ರವಿ, ವಾಸು, ಆರ್ಆರ್ಟಿ ತಂಡದ ಅಪ್ಪಾ ಸ್ವಾಮಿ, ದುರ್ಗೇಶ್, ತಿಲಕ್, ಆಶಿಕ್, ಜಗದೀಶ್ ಪಾಲ್ಗೊಂಡಿದ್ದರು.