ಸಿದ್ದಾಪುರ, ಜೂ. ೧೪: ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ವೀರಾಜಪೇಟೆ ರಸ್ತೆಯ ಸಮೀಪದಲ್ಲಿರುವ ಅಯ್ಯಪ್ಪ ಕೆರೆಯನ್ನು ಪಂಚಾಯಿತಿ ದುರಸ್ತಿಪಡಿಸಿದ್ದು, ಈ ಕೆರೆಯನ್ನು ಶಾಸಕ ಕೆ. ಜಿ. ಬೋಪಯ್ಯ ವೀಕ್ಷಿಸಿದರು.

ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಾಲಯದ ಸಮೀಪದಲ್ಲಿರುವ ಪುರಾತನ ಕೆರೆಯಲ್ಲಿ ಹೂಳು ತುಂಬಿತ್ತು. ಇದನ್ನು ಮನಗಂಡ ಸಿದ್ದಾಪುರ ಗ್ರಾಮ ಪಂಚಾಯಿತಿಯು ಇತ್ತೀಚೆಗೆ ಬೃಹತ್ ಗಾತ್ರದಲ್ಲಿರುವ ಅಂದಾಜು ೧.೯೮ ಎಕರೆ ಕೆರೆಯ ಜಾಗವನ್ನು ಸ್ವಚ್ಛಗೊಳಿಸಿ, ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ದುರಸ್ತಿಪಡಿಸಿ ಕಾಯಕಲ್ಪ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಕೆರೆಯನ್ನು ವೀಕ್ಷಿಸಿದರು. ಅಲ್ಲದೆ, ಕೆರೆಯ ಸುತ್ತಲೂ ಬೇಲಿ ಹಾಕಿ ಕೆರೆಜಾಗ ಒತ್ತುವರಿ ಆಗದಂತೆ ಪಂಚಾಯಿತಿಯು ಎಚ್ಚರವಹಿಸಬೇಕೆಂದು ಪಿಡಿಓ ವಿಶ್ವನಾಥ್‌ಗೆ ಸೂಚನೆ ನೀಡಿದರು. ಶಾಸಕರ ಭೇಟಿ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಗ್ರಾ.ಪಂ. ಸದಸ್ಯರುಗಳಾದ ಜಾಫರ್ ಆಲಿ, ಪೂರ್ಣಿಮಾ, ಲೋಕೇಶ್, ಗುರುವಪ್ಪ, ಎಂ.ಎ. ಆನಂದ, ಜಯಂತ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.