(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜೂ. ೧೪: ಕೈ ಅಗಲ ದಾನ ನೀಡಿ ಊರಿಡಿ ಸಾರುವ ಹಲವರ ಮಧ್ಯೆ ... ಎಡಗೈ ನೀಡಿದ್ದನ್ನು ಬಲಗೈಗೆ ತಿಳಿಯದಂತೆ ದಾನ ಮಾಡುವುದಲ್ಲದೇ, ಕೋವಿಡ್ ಸೋಂಕಿತ ಕುಟುಂಬಗಳಿಗೆ ಪ್ರತಿನಿತ್ಯ ಮಧ್ಯಾಹ್ನ ಹಾಗೂ ಸಂಜೆಯ ವೇಳೆ ಅವರವರ ಮನೆಗೆ ತೆರಳಿ ಮನೆ ಮಂದಿಗೆ ಊಟವನ್ನು ತಲುಪಿಸುತ್ತಿರುವ ಗೋಣಿಕೊಪ್ಪ ಯುವಕರ ತಂಡ ಕೋವಿಡ್ ಆರಂಭವಾದ ದಿನಗಳಿಂದಲೂ ಇಂತಹ ಪುಣ್ಯಕೆಲಸ ಮಾಡುತ್ತಲೇ ಇದೆೆ.

ಮನೆ ಮನೆಗೆ ಸರಿಯಾದ ಸಮಯಕ್ಕೆ ಭೋಜನ ತಲುಪಿಸುವ ಈ ಯುವಕರು ಇಲ್ಲಿಯ ತನಕ ಒಂದೇ ಒಂದು ಫೋಟೋ ತೆಗೆಯಲಿಲ್ಲ. ಪ್ರಚಾರವಂತೂ ಬಯಸಲೇ ಇಲ್ಲ.

ಹಸಿದವರಿಗೆ ಊಟ ನೀಡುವುದರಿಂದ ಭಗವಂತನ ಕೃಪೆಗೆ ನಾವುಗಳು ಪಾತ್ರವಾದರೆ ಸಾಕೆಂಬ ಉದ್ದೇಶ ಹಾಗೂ ನಂಬಿಕೆ ಇವರದ್ದಾಗಿದೆ. ಈ ಯುವಕರ ತಂಡ ಕೇವಲ ಎರಡು ಹೊತ್ತಿನ ಭೋಜನ ನೀಡುವ ಕಾರ್ಯಕ್ಕಷ್ಟೆ ಸೀಮಿತವಾಗಿಲ್ಲ. ಕೊರೊನಾ ಪಾಸಿಟಿವ್ ಕುಟುಂಬಗಳ ಮನೆ ಸೀಲ್‌ಡೌನ್ ಆದ ಸಂದರ್ಭ ಅವರ ಮನೆಗೆ ಬೇಕಾದ ಆಹಾರ ಸಾಮಗ್ರಿಗಳು, ತರಕಾರಿಗಳು, ಮಾತ್ರೆಗಳನ್ನು ತಲುಪಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.

ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಇದೆ ಎಂಬ ವಿಷಯ ತಿಳಿದೊಡನೆ ನಡುರಾತ್ರಿಯಾದರೂ ಸರಿ ಅವರನ್ನು ಆಸ್ಪತ್ರೆಗೆ ಸಾಗಿಸಿ, ಮತ್ತೆ ಮನೆಗೆ ಕರೆತಂದು ಬಿಡುವುದು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಅಲ್ಲದೆ ಕೋವಿಡ್ ಸೋಂಕಿತ ಕುಟುಂಬಗಳ ಮನೆಗೆ ಸರ್ಕಾರದಿಂದ ಸಿಗುವ ಬಿಪಿಎಲ್ ಅಕ್ಕಿಯನ್ನು ದೂರದ ನ್ಯಾಯಬೆಲೆ ಅಂಗಡಿಯಿAದ ತಂದು ನೀಡಿದ್ದಾರೆ.

ಕೋವಿಡ್ ನಿಯಮ ಪಾಲಿಸುವ ಮೂಲಕ ಓರ್ವ ಪಂಚಾಯಿತಿ ಸದಸ್ಯನಾಗಿ ಜನರು ಕಷ್ಟದಲ್ಲಿ ಇರುವ ವೇಳೆ ಏನೆಲ್ಲಾ ಮಾಡಬಹುದು ಅಷ್ಟು ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ.

ಕೈ ಚಾಚಿದವರಿಗೆ ಕೈತುಂಬಾ ನೀಡೋ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬರುತ್ತಿರುವ ಈ ವ್ಯಕ್ತಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆರನೇ ವಾರ್ಡ್ನ ಸದಸ್ಯ ಹಕೀಂ. ಇವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಆರನೇ ವಾರ್ಡ್ನಿಂದ ಗೆಲುವು ಸಾಧಿಸಿದ್ದರು. ಇನ್ನೂ ಕೂಡ ಅಧಿಕಾರ ಸ್ವೀಕರಿಸಿಲ್ಲ. ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿಲ್ಲ, ಆದರೆ ಕೋವಿಡ್ ಸಂದರ್ಭ ಇವರು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗ್ರಾಮದ ಜನರು ಸದಾ ಪ್ರಶಂಸಿಸುತ್ತಾರೆ.