ವೀರಾಜಪೇಟೆ, ಜೂ. ೧೪ : ಕಳೆದ ೩ವರ್ಷಗಳಿಂದ ನಿರಂತರವಾಗಿ ರೈತರು, ಕಾರ್ಮಿಕರು, ಸಾರ್ವಜನಿಕರು ಅತ್ಯಂತ ಸಂಕಷ್ಟಕ್ಕೊಳಗಾಗಿದ್ದು ಹಲವಾರು ಸಮಸ್ಯೆಗಳ ನಡುವೆ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಪ್ರವಾಹ, ಪ್ರಕೃತಿ ವಿಕೋಪ, ಬೆಳೆ ನಷ್ಟ , ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಕೋವಿಡ್ ಲಾಕ್ಡೌನ್ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತರ ಸಮಸ್ಯೆ ಬಗೆಹರಿಸಲಿ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ. ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವೀರಾಜಪೇಟೆಯಲ್ಲಿ ತಾ. ೧೧ ರಂದು ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಗಂಭೀರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಿರಂತರ ಕಾಡಾನೆ, ಹುಲಿ ಹಾವಳಿಯಿಂದ ಬೆಳೆ ನಷ್ಟದೊಂದಿಗೆ ಜಾನುವಾರುಗಳು ಬಲಿಯಾಗುತ್ತಿದ್ದು. ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪರಿಣಾಮ ಸಾವು ನೋವುಗಳು ಸಂಭವಿಸುತ್ತಲೇ ಇದೆ. ಮಳೆ ಹಾಗೂ ಪ್ರಕೃತಿ ವಿಕೋಪದಿಂದ ರೈತರು ಬೆಳೆದ ಫಸಲುಗಳು ಕೈಗೆ ಸಿಗದಂತಾಗಿದ್ದು ಕೃಷಿ ಫಸಲಿಗೆ ಮಾಡಿದ ಸಾಲಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕೊಡಗಿನ ರೈತರ ಸಾಲ ಮನ್ನಾ ಮಾಡಬೇಕು ಎಂದರು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಕೆಲವು ರೈತರು ಬೆಳೆದ ಫಸಲುಗಳಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕೃಷಿ ಫಸಲಿಗೆ ರಾಷ್ಟಿçÃಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡಬೇಕು. ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಫಸಲು ನಾಶ ಮಾಡುವ ಮೂಲಕ ಬೆಳೆಗಾರರು ಹಾಗೂ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿರುವ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು. ವನ್ಯಪ್ರಾಣಿಗಳ ದಾಳಿಯಿಂದ ಸತ್ತ ಜಾನುವಾರುಗಳಿಗೆ ಪರಿಹಾರ ಹೆಚ್ಚಿಸುವ ಮೂಲಕ ತಕ್ಷಣ ನೀಡಬೇಕು.
ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬರಿಗೂ ಲಸಿಕೆ ಶೀಘ್ರವಾಗಿ ಸಿಗುವಂತಾಗಬೇಕು, ಕೊಡಗಿನ ಕುಟ್ಟ, ಬಾಳೆಲೆ, ಕಾನೂರು, ಶ್ರೀಮಂಗಲ, ಹುದಿಕೇರಿ, ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಸಾಮಾನ್ಯ ಜನರ ಸೇವೆಗೆ ಆ್ಯಂಬ್ಯುಲೆನ್ಸ್, ಆಮ್ಲಜನಕ, ಎಕ್ಸರೇ ಸೇರಿದಂತೆ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎಂದರು. ಲಾಕ್ಡೌನ್ ಅವಧಿಯನ್ನು ಜೂನ್ ಅಂತ್ಯದವರೆಗೆ ಮುಂದುವರಿಸಬೇಕು. ಕೋವಿಡ್ ಸಂದರ್ಭದಲ್ಲೂ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ಹೆಚ್ಚು ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಕೊಡಗಿನ ಜನರ ಹಿತ ಕಾಯುವ ಮೂಲಕ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು .ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಣ್ಣ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಸಂಚಾಲಕ ಚೊಟ್ಟೆಕಾಳಪಂಡ ಮನು, ನಲ್ಲೂರು ಅಧ್ಯಕ್ಷ ತೀತಮಾಡ ರಾಜ, ಸಿದ್ದಾಪುರ ವಲಯದ ಕಾರ್ಯದರ್ಶಿ ಲಿಖಿತ್ , ಪ್ರಮುಖರಾದ ಚೆಪ್ಪ್ಪುಡಿರ ಕಿರಣ್ ಕುಟ್ಟಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.
ಇತರ ಬೇಡಿಕೆಗಳು
ಎರಡನೇ ಬಾರಿ ಲಸಿಕೆ ಪಡೆಯುವರಿಗೆ ಮುಂಜಾಗೃತವಾಗಿ ಆದ್ಯತೆ ಮೇರೆಗೆ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಕೋರುತ್ತೇವೆ.