ಕಣಿವೆ, ಜೂ. ೧೪: ಉದ್ಯೋಗದ ಅಭದ್ರತೆಯ ನಡುವೆಯೂ ಪ್ರಾಮಾಣಿಕವಾದ ಹಾಗೂ ನಿಸ್ವಾರ್ಥವಾದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಮೂಲ ಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂಬುದು ಬೇಸರದ ಸಂಗತಿ.

ಯಾವುದೇ ತುರ್ತು ಪರಿಸ್ಥಿತಿ, ಸಾರ್ವತ್ರಿಕ ಚುನಾವಣೆ ಅಥವಾ ಸಮಾಜದಲ್ಲಿ ಅಹಿತಕರ ಘಟನೆಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಹೆಚ್ಚಾಗಿ ಗೃಹರಕ್ಷಕ ಸಿಬ್ಬಂದಿಗಳನ್ನು ಬಳಸಿಕೊಳ್ಳುವ ಸರ್ಕಾರ ಪೊಲೀಸರಿಗೆ ನೀಡುವ ರೀತಿಯಲ್ಲಿಯೇ ಗೃಹರಕ್ಷಕ ಸಿಬ್ಬಂದಿಗಳಿಗೂ ಕೂಡ ಮೂಲ ಸೌಲಭ್ಯ -ಸೌಕರ್ಯಗಳು ಮತ್ತು ಹೆಚ್ಚಿನ ವೇತನ ನೀಡುವ ಮೂಲಕ ಅವರ ಪ್ರಾಮಾಣಿಕ ಸೇವೆಯನ್ನು ಪ್ರೋತ್ಸಾಹಿಸಬೇಕಿದೆ.

ಸಮಾಜದಲ್ಲಿ ಬಹು ದೊಡ್ಡ ಭಯಾನಕವಾದ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ನಿಗ್ರಹಕ್ಕೆ ಸರ್ಕಾರ ತೆರೆದಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ಜಿಲ್ಲಾಡಳಿತ ನೇಮಕ ಮಾಡಿಕೊಂಡಿರುವ ಗೃಹ ರಕ್ಷಕ ಸಿಬ್ಬಂದಿಗಳಿಗೆ ಕೇವಲ ೩೮೦ ರೂ. ದಿನಭತ್ಯೆ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇದೇ ಗೃಹರಕ್ಷಕ ಸಿಬ್ಬಂದಿಗಳಿಗೆ ದಿನಭತ್ಯೆಯಾಗಿ ರೂ. ೭೫೦ ನೀಡಲಾಗುತ್ತಿದೆ. ಈ ತಾರತಮ್ಯ ಏಕೆ? ಎಂಬುದು ಇಲ್ಲಿನ ಬಹುತೇಕ ಗೃಹರಕ್ಷಕ ಸಿಬ್ಬಂದಿಗಳ ಪ್ರಶ್ನೆಯಾಗಿದೆ.

ಕೊರೊನಾ ತಂದೊಡ್ಡಿರುವ ಸಂಕಷ್ಟದ ಸನ್ನಿವೇಶದಲ್ಲಿ ಏರಿಕೆಯಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ನಮ್ಮಂತಹವರು ಹೇಗೆ ಸರ್ ಜೀವನ ಕಟ್ಟೋದು? ಜಿಲ್ಲಾಡಳಿತ ನಮಗೆ ಕೊಡೋ ೩೮೦ ರೂ.ಗಳಲ್ಲಿ ನಾವು ೧೮೦ ರೂ. ಕೊಟ್ಟು ಅಡುಗೆ ಎಣ್ಣೆ ತಗೊಳ್ಳಲಾ....? ೧೨೦ ರೂ. ಕೊಟ್ಟು ಒಂದು ಕೆಜಿ ಬೇಳೆ ತಗೊಳ್ಳೋದಾ...? ಒಂದು ಕೆಜಿಗೆ ೮೦ ರೂ. ಕೊಟ್ಟು ಬೀನ್ಸ್ ತಗೊಳ್ಳೊದಾ..? ಮನೇಲಿ ಅನಾರೋಗ್ಯ ಪೀಡಿತ ವಯಸ್ಸಾದ ತಂದೆ - ತಾಯಿ ಇದ್ದಾರೆ. ಅವರಿಗೆ ಔಷಧಿಗೆ, ಆಸ್ಪತ್ರೆಗೆ ಕಟ್ಟಲಾ...? ಇತ್ತ ಶಾಲೆ ತೆರೆಯದಿದ್ದರೂ ನಿಮ್ಮ ಮಗುವಿಗೆ ಪುಸ್ತಕ ಕೊಟ್ಟ ಫೀಜು ಕಟ್ಟಿ, ಶಾಲೆಯ ಫೀಜು ಕಟ್ಟಿ ಅಂತಾ ಆಗಂದಾಗ್ಗೆ ಫೋನ್ ಮಾಡೋ ಶಾಲೆಗೆ ಕಟ್ಟಲಾ...? ಏನು ಮಾಡಲಿ...? ನೀವೇ ಹೇಳಿ ಸರ್, ಅಂತಾ ಪದವಿ ವ್ಯಾಸಂಗ ಮಾಡಿರುವ ಗೃಹ ರಕ್ಷಕ ಸಿಬ್ಬಂದಿಯೋರ್ವರು ಪತ್ರಿಕೆ ಜೊತೆ ಸಂಕಟ ಪಟ್ಟು ಮಾತಾಡೋದು ನೋಡಿ ನಿಜಕ್ಕೂ ಸಂಕಟ ಆಗುತ್ತದೆ.

‘ಜಿಲ್ಲೆಯಲ್ಲಿ ಒಟ್ಟು ೨೫೨ ಮಂದಿ ಗೃಹರಕ್ಷಕ ಸಿಬ್ಬಂದಿಗಳಿದ್ದಾರೆ. ಈ ಪೈಕಿ ೫೦ ಮಂದಿ ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದಾರೆ. ಆ ೫೦ ಮಂದಿಗೂ ಪೊಲೀಸ್ ಇಲಾಖೆ ದಿನಭತ್ಯೆಯಾಗಿ ತಲಾ ಓರ್ವ ಸಿಬ್ಬಂದಿಗೆ ೭೫೦ ರೂ. ನೀಡುತ್ತಿದೆ. ಆದರೆ ಜಿಲ್ಲಾಡಳಿತದ ಸುಪರ್ದಿಯಲ್ಲಿ ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‌ಗಳಲ್ಲಿ ಕರ್ತವ್ಯದಲ್ಲಿರುವ ಗೃಹ ರಕ್ಷಕ ಸಿಬ್ಬಂದಿಗಳಿಗೆ ತಲಾ ೩೮೦ ರೂ. ದಿನ ಭತ್ಯೆ ನೀಡಲಾಗುತ್ತಿದೆ. ಆದರೆ ನಾವು ಕೊರೊನಾ ಪೀಡಿತರು ಹಾಗೂ ಸೋಂಕಿತರ ಜೊತೆ ದಿನವಿಡೀ ಶ್ರಮಪಟ್ಟು ಕರ್ತವ್ಯ ಮಾಡಬೇಕು. ಕೇವಲ ಎಂಟು ಗಂಟೆಗಳ ಅವಧಿಯ ಕರ್ತವ್ಯವಾದರೂ ಕೂಡ ಸಮಯ ಪರಿಪಾಲನೆಯನ್ನು ಲೆಕ್ಕಿಸದೇ ಪ್ರಾಮಾಣಿಕ ಸೇವೆ ಮಾಡುತ್ತಾ ಇದ್ದೇವೆ. ಆದರೂ, ನಮಗೇಕೆ ಈ ತಾರತಮ್ಯ?’ ಎಂದು ಕೋವಿಡ್ ಕೇಂದ್ರದ ಮತ್ತೋರ್ವ ಸಿಬ್ಬಂದಿ ಅಳಲು ತೋಡಿಕೊಂಡರು.

ಗೃಹರಕ್ಷಕ ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ದೈಹಿಕ ಹಾನಿಯಾದಲ್ಲಿ ಸೂಕ್ತ ಪರಿಹಾರವನ್ನು ಸಂಬAಧಿಸಿದ ಕೋರಿಕಾ ಪ್ರಾಧಿಕಾರವೇ ಭರಿಸಬೇಕು. ಜೊತೆಗೆ ಕೋವಿಡ್ ಕೇಂದ್ರಗಳಲ್ಲಿ ಕೆಲಸ ಮಾಡುವ ಸಂದರ್ಭ ಕೋವಿಡ್ ಬಾಧಿತರಾದರೆ ಅಂತಹವರಿಗೆ ೧೪ ದಿನಗಳ ಹೋಂ ಕ್ವಾರಂಟೈನ್ ಚಿಕಿತ್ಸಾ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಬೇಕು ಎಂದು ಆರಕ್ಷಕ ಮಹಾ ನಿರೀಕ್ಷಕರು ಆಯಾಯ ಕೋರಿಕಾ ಪ್ರಾಧಿಕಾರಿಗಳು ಹಾಗು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗೃಹ ರಕ್ಷಕ ಸಿಬ್ಬಂದಿಗಳು. ದೂರದ ಕುಗ್ರಾಮಗಳಲ್ಲಿ ನೆಲೆಸಿರುವ ಗೃಹರಕ್ಷಕ ಸಿಬ್ಬಂದಿಗಳು ತಾವು ಆಯ್ಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುವ ಸ್ಥಳಗಳಿಗೆ ತೆರಳಲು ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲಿ ಅವರಿವರನ್ನು ಕಾಡಿ ಬೇಡಿ ಕರ್ತವ್ಯಕ್ಕೆ ಧಾವಿಸುತ್ತಿದ್ದಾರೆ. ಇವರಿಗೂ ಪೊಲೀಸ್, ಕಂದಾಯ, ಅರಣ್ಯ ಮೊದಲಾದೆಡೆಗಳ ಇಲಾಖೆಗಳ ಸಿಬ್ಬಂದಿಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಒದಗಿಸಬೇಕಿದೆ.

ಸಾರಿಗೆ ಇಲಾಖೆ ವಾಹನಗಳಲ್ಲಿ ಸಂಚರಿಸಲು ಉಚಿತ ಪಾಸ್, ಆರೋಗ್ಯ ಸುರಕ್ಷಾ ಪಾಲಿಸಿ ಒದಗಿಸಬೇಕು. ಗೃಹ ರಕ್ಷಕ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ನಿಧನರಾದರೆ ಅವರಿಗೆ ಗೌರವ ರಕ್ಷೆ ನೀಡುವಂತಾಗಬೇಕು. ಗೃಹರಕ್ಷಕ ದಳದ ಸಿಬ್ಬಂದಿ ಎಂದು ಸಂಬೋಧಿಸದೇ ಪ್ಯಾರಾ ಪೊಲೀಸ್ ಫೋರ್ಸ್ ಎಂದು ನಾಮಕರಣವಾಗ ಬೇಕು. ಉದ್ಯೋಗ ಭದ್ರತೆ ಸೇರಿದಂತೆ ಇನ್ನಿತರ ಸೌಕರ್ಯ ಹಾಗೂ ಸೌಲಭ್ಯಗಳನ್ನು ಸರ್ಕಾರ ಸೃಷ್ಟಿಸಬೇಕು ಎಂದು ಹೆಸರು ಹೇಳದ ಕೆಲವು ಸಿಬ್ಬಂದಿಗಳು ‘ಶಕ್ತಿ’ಯ ಮೂಲಕ ಒತ್ತಾಯಿಸಿದ್ದಾರೆ.

-ಕೆ. ಎಸ್. ಮೂರ್ತಿ

ಕುಶಾಲನಗರ