ಮಡಿಕೇರಿ ಜೂ. ೧೪: ೬೦ ವಯಸ್ಸು ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಕೋವಿಡ್ ಲಸಿಕೆ ನೀಡಿಕೆಯ ಕಾರ್ಯ ಕೊಡಗಿನ ಮಟ್ಟಿಗೆ ಪೂರ್ಣಗೊಂಡಿದೆ. ಅಧಿಕೃತ ಮಾಹಿತಿ ಪ್ರಕಾರ ಶೇ. ನೂರು ಸಾಧನೆಯಾಗಿದೆ. ಅದೇ ರೀತಿ ಮುಂಚೂಣಿ ಕಾರ್ಯಕರ್ತರಿಗೆ ಪ್ರಥಮ ಡೋಸ್ ನೀಡಿಕೆಯಲ್ಲಿ ಶೇ. ನೂರು ಸಾಧನೆಯಾಗಿದೆ. ಆದರೆ. ಇವರಿಗೆ ದ್ವ್ವಿತೀಯ ಡೋಸ್ ನೀಡಿಕೆಯಲ್ಲಿ ಶೇ. ೪೮.೪೪ ಸಾಧನೆಯಾಗಿದೆ.ಆಶ್ಚರ್ಯವೆಂದರೆ, ೬೦ ರ ಮೇಲ್ಪಟ್ಟ ಕೊಡಗಿನ ಒಟ್ಟು ೫೧,೦೩೯ ಮಂದಿಗೆ ಪ್ರಥಮ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು ಶೇ, ೧೦೧.೬೮ ಸಾಧನೆಯಾಗಿದೆ ಎಂದು ಅಧಿಕೃತವಾಗಿ ಬಿಡುಗಡೆಗೊಂಡ ವರದಿಯಲ್ಲಿ ತೋರಿಸಲಾಗಿದೆ. ನೂರಕ್ಕಿಂತ ಜಾಸ್ತಿ ಪ್ರಮಾಣದ ಸಾಧನೆ ಹೇಗಾಗಲು ಸಾಧ್ಯ ಎಂದು ಸಂಶಯಗೊAಡು “ಶಕ್ತಿ”ಯು ಜಿಲ್ಲಾ ಲಸಿಕಾಧಿಕಾರಿ ಡಾ. ಗೋಪಿನಾಥ್ ಸುರೇಶ್ ಅವರಿಂದ ಮಾಹಿತಿ ಬಯಸಿತು. ಅವರ ಹೇಳಿಕೆ ಹೀಗಿದೆ

‘‘ಲಸಿಕಾ ಅಂಕಿ ಅಂಶಗಳು ಪೋರ್ಟಲ್‌ನಲ್ಲಿ ಕೊಡಗೂ ಸೇರಿದಂತೆ ಇತರ ಎಲ್ಲ ಕಡೆಯೂ ೨೦೧೧ ರ ಜನಸಂಖ್ಯಾ ಸಮೀಕ್ಷೆ ಆಧಾರದಿಂದ ಮಾಹಿತಿಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಇದೀಗ ೧೦ ವರ್ಷಗಳೇ ಕಳೆದಿರುವದರಿಂದ ಸಹಜವಾಗಿಯೇ ಜನಸಂಖ್ಯೆ ಜಾಸ್ತಿಯಾಗಿರುತ್ತದೆ. ಹಳೆ ಜನಸಂಖ್ಯಾ ಗಣತಿ ಆಧಾರದಲ್ಲಿ ಈಗ ನೀಡಿರುವ ಲಸಿಕೆ ಪ್ರಮಾಣ ಇದರಿಂದಾಗಿ ಶೇ. ನೂರನ್ನೂ ಮೀರಿದೆ” ೬೦ ವಯಸ್ಸು ಮೇಲ್ಪಟ್ಟವರಲ್ಲಿ ೨೦,೩೭೫ ಮಂದಿ ಇದುವರೆಗೆ ದ್ವಿತೀಯ ಡೋಸ್ ಪಡೆದಿದ್ದಾರೆ.

ಇನ್ನುಳಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆಯಲ್ಲಿ ಅಧಿಕೃತ ವರದಿಯನ್ವಯ ಶೇ.೧೩೪. ೫೨ ಸಾಧನೆಯಾಗಿದೆ ಎಂದು ತೋರಿಸಲಾಗಿದೆ. ಇದು ಹೇಗೆ ಸಾಧ್ಯ ಎನ್ನುವ “ಶಕ್ತಿ”ಯ ಪ್ರಶ್ನೆಗೆ ಡಾ. ಗೋಪಿನಾಥ್ ಸುರೇಶ್ ನೀಡಿದ ವಿವರಣೆ ಹೀಗಿದೆ: “ಕೊರೊನಾ ವೈರಾಣು ತಡೆಯಲು ದೇಶದಲ್ಲಿ ಲಸಿಕಾ ಅಬಿಯಾನ ಪ್ರಾರಂಭವಾದಾಗ ಮುಂಚೂಣಿ ಕಾರ್ಯಕರ್ತರೆಂದು ವೈದ್ಯಕೀಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಮೊದಲಾಗಿ ಪರಿಮಿತಿ ವಿಭಾಗದ ಮಂದಿಯನ್ನು ಮಾತ್ರ ಪರಿಗಣಿಸಲಾಗಿತ್ತು. ಕಾಲಕ್ರಮೇಣ ಇನ್ನೂ ಅನೇಕ ಇಲಾಖೆಗಳ ಸೇವಾಕರ್ತರನ್ನು ಹಾಗೂ ಕ್ಷೇತ್ರಗಳಲ್ಲಿ ಕೆಲಸ

(ಮೊದಲ ಪುಟದಿಂದ) ಮಾಡುವವರನ್ನು ಮುಂಚೂಣಿ ಕಾರ್ಯಕರ್ತರ ಪಟ್ಟಿಗೆ ಸೇರ್ಪಡೆಗೊಳಿಸುತ್ತ ಹೋದುದರಿಂದ ಅದರ ಪಟ್ಟಿ ಮತ್ತು ಸಂಖ್ಯೆ ಬೆಳೆಯತೊಡಗಿತು. ಆದರೆ, ಲಸಿಕಾ ನೀಡಿಕೆಯ ವಿದ್ಯುನ್ಮಾನದ ಪೋರ್ಟಲ್‌ನಲ್ಲಿ ಮಾತ್ರ ಪ್ರಾರಂಭದಲ್ಲಿದ್ದ ಮುಂಚೂಣಿ ಕಾರ್ಯಕರ್ತರ ಸಂಖ್ಯೆಯೇ ಇದ್ದು ಮತ್ತೆ ಸೇರ್ಪಡೆಗೊಂಡ ಇಲಾಖಾ ಸಿಬ್ಬಂದಿಗಳ ಸಂಖ್ಯೆಯನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿಲ್ಲ. ಹೀಗಾಗಿ ಲಸಿಕೆ ನೀಡಿಕೆಯಲ್ಲಿ ಶೇ. ನೂರಕ್ಕಿಂತಲೂ ಸಾಧನೆಯಾಗಿದೆ ಎಂಬ ಮಾಹಿತಿ ವಿದ್ಯುನ್ಮಾನದ ಪೋರ್ಟಲ್ ವರದಿಯಲ್ಲಿ ಲಭ್ಯವಾಗುತ್ತಿದೆ. ಇದನ್ನೆಲ್ಲ ಪೂರ್ಣವಾಗಿ ಸಮರ್ಪಕಗೊಳಿಸಲು ಇನ್ನೂ ಕಾಲಾವಕಾಶದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಲಸಿಕೆ ನೀಡಿಕೆಯಲ್ಲ್ಲಿ ಕೊಡಗು ಉತ್ತಮ ಸಾಧನೆಗೈದಿರುವುದು ಅಂಕಿ ಅಂಶಗಳಿAದ ದೃಢಪಟ್ಟಿದೆ. ಇನ್ನುಳಿದಂತೆ ಇರುವ ಮಾಹಿತಿ ಹೀಗಿದೆ. ೫೬೮೪ ಮಂದಿ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಡೋಸ್ ಲಸಿಕೆ ನೀಡಲಾಗಿದ್ದು ಶೇ. ೮೬.೬೫ ಸಾಧನೆಯಾಗಿದೆ. ದ್ವಿತೀಯ ಡೋಸ್ ೪೭೬೦ ಮಂದಿಗೆ ನೀಡಲ್ಪಟ್ಟು ಶೇ. ೮೩.೭೪ ರಷ್ಟು ಗುರಿ ಸಾಧಿಸಲಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ ಪ್ರಥಮ ಡೋಸ್ ಪೂರ್ಣಗೊಂಡಿದ್ದು ದ್ವಿತೀಯ ಡೋಸ್ ೨೦೩೭ ಮಂದಿಗೆ ನೀಡಲ್ಪಟ್ಟು ಶೇ. ೪೮.೪೪ ಸಾಧನೆಯಾಗಿದೆ. ೪೫ ರಿಂದ ೫೯ ವಯೋಮಿತಿಯ ಮಂದಿಗೆ ಲಸಿಕೆ ನೀಡಿಕೆಯಲ್ಲಿಯೂ ಈಗಾಗಲೇ ಕೊಡಗು ಶೇ. ೫೦ ಕ್ಕಿಂತ ಅಧಿಕ ಗುರಿ ಸಾಧಿಸಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ. ಈಗಾಗÀಲೇ ಈ ವಯೋಮಿತಿಯ ೫೪,೫೬೫ ಮಂದಿಗೆ ಲಸಿಕೆ ನಿಡಲಾಗಿದ್ದು ಶೇ.೫೧.೭೭ ರಷ್ಟು ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ೧೮ ವಯಸ್ಸಿನಿಂದ ೪೪ ರ ವಯೋಮಿತಿವರೆಗಿನ ೨೨,೮೩೧ ಮಂದಿಗೆ ಇದುವರೆಗೆ ಲಸಿಕೆ ನೀಡಲಾಗಿದೆ ಎಂದು ಗೊತ್ತಾಗಿದೆ.