ಸೋಮವಾರಪೇಟೆ, ಜೂ. ೧೪: ಮಳೆಗಾಲ ಆರಂಭದ ಪ್ರಥಮ ಸಂತೆ ದಿನವಾದ ಸೋಮವಾರದಂದು ಸೋಮವಾರಪೇಟೆಯಲ್ಲಿ ಜನಜಾತ್ರೆಯೊಂದಿಗೆ ವ್ಯಾಪಾರ ವಹಿವಾಟು ನಡೆಯಿತು. ಪಟ್ಟಣದ ಬಹುತೇಕ ರಸ್ತೆಗಳು ಟ್ರಾಫಿಕ್ ಜಾಮ್ನಿಂದ ಗಿಜಿಗುಟ್ಟಿದವು.
ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದರಿಂದ ಸಂತೆ ದಿನದಂದು ಪಟ್ಟಣದಲ್ಲಿ ಜನಜಂಗುಳಿ ಉಂಟಾಯಿತು. ಇದರೊಂದಿಗೆ ಮಳೆಗಾಲದ ಆರಂಭವೂ ಆಗಿರುವುದರಿಂದ ಕೃಷಿ ಪರಿಕರಗಳ ಖರೀದಿ, ಪ್ಲಾಸ್ಟಿಕ್, ಟಾರ್ಪಲ್, ಕೊಡೆಗಳು, ಜರ್ಕಿನ್, ಸ್ವೆಟ್ಟರ್ಗಳ ಖರೀದಿಯ ಭರಾಟೆ ಜೋರಾಗಿತ್ತು.
ಬೆಳಗ್ಗಿನಿಂದಲೂ ಭಾರೀ ಮಳೆ ಸುರಿಯುತ್ತಿದ್ದುದರಿಂದ ದ್ವಿಚಕ್ರ ವಾಹನಗಳಿಗಿಂತ ನಾಲ್ಕುಚಕ್ರದ ವಾಹನಗಳೇ ಪಟ್ಟಣದಲ್ಲಿ ಅಧಿಕವಾಗಿ ಕಂಡುಬAದವು. ಪಟ್ಟಣದಲ್ಲಿ ವಾಹನ ಗಳ ನಿಲುಗಡೆಗೂ ಸ್ಥಳಾವಕಾಶದ ಕೊರತೆ ಎದುರಾಯಿತು.
ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಪಟ್ಟಣದಲ್ಲಿ ಸುಗಮ ವಾಹನ ಸಂಚಾರಕ್ಕೆ ಶ್ರಮಿಸುತ್ತಿದ್ದರು. ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಗೊಳಿಸುತ್ತಿದ್ದುದರಿಂದ ಪಟ್ಟಣದ ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಕಂಡುಬAತು.
ಇಲ್ಲಿನ ಮಡಿಕೇರಿ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಯಿಂದಾಗಿ ಪಟ್ಟಣಕ್ಕೆ ಆಗಮಿಸುವ ಹಾಗೂ ಪಟ್ಟಣದಿಂದ ತೆರಳುವ ಮಂದಿ ಸಮಸ್ಯೆ ಎದುರಿಸುವಂತಾಯಿತು. ಸಂತೆ ದಿನವಾದರಿಂದ ಗ್ರಾಮೀಣ ಭಾಗದಿಂದ ಹೆಚ್ಚಿನ ಮಂದಿ ಪಟ್ಟಣಕ್ಕೆ ಆಗಮಿಸಿದ್ದರು. ಪಟ್ಟಣದಲ್ಲಿ ಸಾಮಾಜಿಕ ಅಂತರ ಮಾಯವಾಗಿ, ಕೊರೊನಾ ವೈರಸ್ ಹರಡುವ ಭಯವೂ ಇಲ್ಲದೇ ವ್ಯಾಪಾರ ವಹಿವಾಟು ನಡೆಯಿತು. ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲೂ ಸಾಮಾಜಿಕ ಅಂತರ ಮಾಯವಾಗಿತ್ತು.
ಮಧ್ಯಾಹ್ನ ೧ ಗಂಟೆಗೆ ಪೊಲೀಸರು ಪಟ್ಟಣದಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸುತ್ತಿದ್ದರೂ ವ್ಯಾಪಾರ ವಹಿವಾಟು ಮಾತ್ರ ನಡೆಯುತ್ತಲೇ ಇತ್ತು. ೨ ಗಂಟೆಯ ವೇಳೆಗೆ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದವು.