ಭಾಗಮಂಡಲ, ಜೂ. ೧೪: ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಲಕಾವೇರಿ ಬಳಿಯ ಚೇರಂಗಾಲ ಗ್ರಾಮದ ಜನತೆಯಲ್ಲಿ ಮತ್ತೆ ಮಳೆಗಾಲವೆಂದರೆ ಭಯ, ಆತಂಕದ ಮಾತುಗಳೇ ಕೇಳಿಬರುತ್ತಿವೆ. ಕಳೆದ ವರ್ಷ ಆಗಸ್ಟ್ನಲ್ಲಿ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಐವರು ಸಾವಿಗೀಡಾಗಿದ್ದರು. ಚೇರಂಗಾಲ ಗ್ರಾಮದ ಕೋಳಿಕಾಡು ಮತ್ತು ಬೆನ್ನೂರುಕಾಡು ಬೆಟ್ಟಗಳು ಕುಸಿದು ಗ್ರಾಮದ ಜನರು ದಿಗ್ಭಂಧನಕ್ಕೊಳಗಾಗಿದ್ದರು.
ತಿAಗಳ ಕಾಲ ಸಂಪರ್ಕ ಕಳೆದುಕೊಂಡು ಜೀವನ ಸಾಗಿಸಿದ್ದರು. ಆದರೆ ಕಳೆದ ವರ್ಷ ಹಾನಿಗೀಡಾದ ರಸ್ತೆಗಳು ಅರೆಬರೆ ದುರಸ್ತಿಯಾಗಿ ಉಳಿದಿದ್ದು ಕೆಲವರ ನಾಟಿ ಗದ್ದೆ ಹಾಗೂ ತೋಟಗಳು ಮಣ್ಣಿನಿಂದ ಮುಚ್ಚಿಹೋಗಿದ್ದು, ಕೃಷಿ ಮಾಡಲಾಗದ ಸ್ಥಿತಿಯಲ್ಲಿದೆ. ಇನ್ನು ಕೊಚ್ಚಿಹೋದ ತೋಟಗಳ ಮಾಲೀಕರಿಗೆ ಪರಿಹಾರವೇ ದೊರಕಿಲ್ಲ. ಚೇರಂಗಾಲ ಗ್ರಾಮವು ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು ಯಾವುದೇ ದೈನಂದಿನ ಚಟುವಟಿಕೆಗಳಿಗೆ ಭಾಗಮಂಡಲವನ್ನು ಅವಲಂಭಿಸಬೇಕು.
ಕಳೆದ ವರ್ಷ ಗಜಗಿರಿ ಬೆಟ್ಟ ಕುಸಿದಾಗ ಕಾವೇರಿ ನದಿಗೆ ಅಡ್ಡಲಾಗಿ ಇದ್ದ ಮತ್ತಾರಿ ಸೇತುವೆಗೆ ಹಾನಿ ಉಂಟಾಗಿದ್ದು, ಕೆಲವು ಭಾಗಗಳಿಗೆ ಸಂಪರ್ಕ ಕಡಿತಗೊಂಡಿತ್ತು. ಸೇತುವೆಗೆ ಮಣ್ಣಿನ ರಾಶಿ ಹಾಗೂ ಮರದ ತುಂಡು ಬಡಿದು ಸೇತುವೆ ತುಂಡಾಗಿದ್ದು ಇದುವರೆಗೆ ಅದರ ದುರಸ್ತಿಯಾಗಲಿ ಹೊಸ ಸೇತುವೆ ನಿರ್ಮಾಣವೂ ಆಗಿಲ್ಲ. ಮತ್ತಾರಿ, ಪರಿವಾರ, ಮೂಲೆಮಜಲು, ಹೊಸೂರು, ಗಿರಿಜನ ಕಾಲೋನಿ ಸೇರಿದಂತೆ ಸುಮಾರು ೪೫ಕ್ಕೂ ಅಧಿಕ ಕುಟುಂಬಗಳಿಗೆ ಸಂಪರ್ಕಕ್ಕೆ ಇರುವ ಮತ್ತಾರಿ ಸೇತುವೆಯ ದುರಸ್ತಿ ಮಾಡದೆ ತಡೆಗೋಡೆ ಕೆಲಸಕ್ಕೆ ಮುಂದಾಗಿದ್ದು, ಸೇತುವೆಯ ಒಂದು ಬದಿಗೆ ಮರಳು ಚೀಲ ಇಟ್ಟು ತಡೆಗೋಡೆ ನಿರ್ಮಿಸಲಾಗುತ್ತಿದೆ.
ಸೇತುವೆ ಕಾಮಗಾರಿ ಮಾಡದೆ ತಡೆಗೋಡೆಯ ನಿರ್ಮಾಣಕ್ಕೆ ಮುಂದಾಗಿರುವುದು
(ಮೊದಲ ಪುಟದಿಂದ) ಎಷ್ಟರಮಟ್ಟಿಗೆ ಸರಿ ಎಂದು ಗ್ರಾಮದ ಮತ್ತಾರಿ ರಾಜ ಪ್ರಶ್ನಿಸಿದ್ದಾರೆ. ಅಲ್ಲದೆ ಚೇರಂಗಾಲ ಶಾಲೆಯ ಸಮೀಪದಲ್ಲಿರುವ ಕಾಲು ಸೇತುವೆ ಕಳೆದ ವರ್ಷ ಅದೇ ಸಂದರ್ಭ ಕೊಚ್ಚಿಹೋಗಿದ್ದು, ಇಲ್ಲಿ ಅವಶ್ಯಕವಾಗಿ ಕಾಲು ಸೇತುವೆ ಮಾಡಬೇಕಿದೆ. ಇದರಿಂದ ಎಷ್ಟೋ ಉಪಯೋಗ ಆಗಲಿದೆ. ಅಲ್ಲದೆ ಮೊಟ್ಟನ, ಕಾನೆಹಿತ್ಲು ಸೇರಿದಂತೆ ೨೦ಕ್ಕೂ ಅಧಿಕ ಮನೆಗಳಿಗೆ ಉಪಯೋಗ ಆಗಲಿದೆ. ಅಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ ಕೂಡ ಪ್ರಯೋಜನ ಆಗಲಿದೆ. ಮತ್ತಾರಿ ಸೇತುವೆ ಹಾಗೂ ಕಾಲು ಸೇತುವೆ ಆದಷ್ಟು ಬೇಗ ನಿರ್ಮಾಣ ಆಗಬೇಕು ಎಂದು ಮತ್ತಾರಿ ರಾಜ ಒತ್ತಾಯಿಸಿದ್ದಾರೆ. ಇನ್ನು ಕೋಡಿ ಕುಟುಂಬಸ್ಥರ ಮನೆಗಳಿಗೆ ಸಾಗುವ ದಾರಿಯಲ್ಲಿನ ಸೇತುವೆ ಹಾಗೂ ಕೂಡಕಂಡಿ ಮಾರ್ಗದಲ್ಲಿನ ಕಾಲು ಸೇತುವೆ ಸಹ ಹಾಳಾಗಿದ್ದು, ದುರಸ್ತಿಪಡಿಸಬೇಕಾದ ಅಗತ್ಯವಿದೆ.
ಚೇರಂಗಾಲ-ಕೋರAಗಾಲ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದ್ದು, ಅಲ್ಲಲ್ಲಿ ಬರೆ ಕುಸಿದು ರಸ್ತೆಗಳಿಗೆ ಹಾನಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲಿಯೂ ಸರಿಪಡಿಸದೇ ಇದ್ದು ಮುಖ್ಯರಸ್ತೆಯ ತಲಾರ ಬಾಣೆ ಎಂಬಲ್ಲಿ ಪೆರುವಾಯಿ ಇಂದಿರಾ ಪ್ರಭಾಕರ್ ಎಂಬವರ ಮನೆಯ ಪಕ್ಕದಲ್ಲಿ ರಸ್ತೆಯ ಒಂದು ಬದಿ ಕುಸಿದು ಹೋಗಿದೆ. ಈ ಬಾರಿಯ ಮಳೆಗಾಲದಲ್ಲಿ ಅದು ಸಂಪೂರ್ಣ ಕುಸಿದುಹೋಗುವ ಸಾಧ್ಯತೆ ಇದ್ದು, ಈ ಹಿಂದೆ ಭಾಗಮಂಡಲಕ್ಕೆ ರಾಷ್ಟçಪತಿ ಬಂದ ಸಂದರ್ಭ ಮರಳು ಚೀಲ ತುಂಬಿ ತಡೆಗೋಡೆ ಮಾಡಲಾಗಿದ್ದು, ಅದು ಈ ಬಾರಿ ಮಳೆಗೆ ಉಳಿಯುವುದು ಸಂಶಯ. ಇಲ್ಲಿ ತಡೆಗೋಡೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ಭೂಕುಸಿತದ ಸಂದರ್ಭದಲ್ಲಿ ೨೦ಕ್ಕೂ ಅಧಿಕ ಮಂದಿಯ ೨೦ ಎಕರೆ ಗದ್ದೆಗಳಲ್ಲಿ ಮಣ್ಣು ತುಂಬಿದ್ದು ಭತ್ತದ ಕೃಷಿ ಮಾಡಲು ಯೋಗ್ಯವಾಗಿಲ್ಲ.
ಭತ್ತದ ಕೃಷಿ ಅವಲಂಭಿತರಾದವರು ತುತ್ತು ಅನ್ನಕ್ಕೆ ಅಂಗಡಿಯಿAದ ಅಕ್ಕಿ ತರಬೇಕಾಗಿದೆ. ಕಳೆದ ವರ್ಷ ಇದೇ ಸಂದರ್ಭ ಕೋಳಿಕಾಡು ಜೋಯಪ್ಪ ಎಂಬವರ ಎರಡು ಎಕರೆ ತೋಟವು ಬರೆ ಕುಸಿತಕ್ಕೆ ಸಿಲುಕಿ ಹಾನಿಯಾಗಿದ್ದು, ಅಲ್ಲದೆ ವಾಸದ ಮನೆಗೂ ಹಾನಿಯಾಗಿತ್ತು. ಇದುವರೆಗೂ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ. ಅಲ್ಲದೆ ವಾಸಕ್ಕೆ ಯೋಗ್ಯವಲ್ಲದ ಕೆಲವು ಮನೆಗಳಿದ್ದು, ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ನೋಟೀಸ್ ನೀಡಿದ್ದು, ಸುರಕ್ಷಿತ ಸ್ಥಳ ಎಂದರೆ ಯಾವುದು ಎಂಬದು ಇವರಿಗೆ ಪ್ರಶ್ನೆಯಾಗಿದೆ. ಸುರಕ್ಷಿತ ಪ್ರದೇಶವನ್ನು ಅಧಿಕಾರಿಗಳು ಗುರುತು ಮಾಡಿಕೊಡಲಿ ಎಂದು ಗ್ರಾಮಸ್ಥರು ಪತ್ರಿಕೆಯೊಂದಿಗೆ ತಿಳಿಸಿದ್ದಾರೆ.
ಕೋಳಿಕಾಡು ಜೋಯಪ್ಪ ಅವರ ಮನೆ ವಾಸಕ್ಕೆ ಯೋಗ್ಯ ಇಲ್ಲ ಎಂದು ಸ್ಥಳೀಯವಾಗಿ ೨೫,೦೦೦ ರೂ.ಗೆ ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಲಾಗದೆ ಟಾರ್ಪಲ್ ಹೊದಿಕೆಯೊಂದಿಗೆ ತಾತ್ಕಾಲಿಕ ಮನೆ ನಿರ್ಮಿಸಿಕೊಂಡಿದ್ದಾರೆ.
ಕಳೆದ ವರ್ಷ ಭಾಗಮಂಡಲದಲ್ಲಿನ ಭೂಕುಸಿತದ ಸಂದರ್ಭದಲ್ಲಿ ಗ್ರಾಮದಲ್ಲಿ ಕೆಲವು ರಸ್ತೆಗಳು ಹಾಳಾಗಿದ್ದು, ಸರಿಪಡಿಸುವ ನಿಟ್ಟಿನಲ್ಲಿ ನೂತನ ಗ್ರಾಮ ಪಂಚಾಯಿತಿ ಮುಂದಾಗಿದ್ದು, ರಸ್ತೆಯಲ್ಲಿ ಬಂಡೆಕಲ್ಲುಗಳಿದ್ದು ಒಡೆಯುವ ಕೆಲಸ ಮಾಡಲಾಗುತ್ತಿದೆ. ಮತ್ತಾರಿ ಕಡೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಗಾಲದಲ್ಲಿ ಹಾನಿಗೊಳಗಾಗುವ ಸಾಧ್ಯತೆ ಇದ್ದು, ಮುಂಜಾಗ್ರತೆಯಾಗಿ ಉಪಯೋಗಕ್ಕೆ ಬಾರದ ವಿದ್ಯುತ್ ಕಂಬಗಳನ್ನು ಬಳಸಿ ಪಾಲ ನಿರ್ಮಾಣ ಮಾಡಿಕೊಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿರಕಜೆ ನಾಗೇಶ್ ಹೇಳಿದ್ದಾರೆ.
-ಕುಯ್ಯಮುಡಿ ಸುನಿಲ್