ಗೋಣಿಕೊಪ್ಪಲು, ಜೂ. ೧೪: ಅನೇಕ ಸಮಯದಿಂದ ಕಾಡು ಸೇರಿದ್ದ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ಉದ್ಯಾನಕ್ಕೆ ಕಾಯಕಲ್ಪ ದೊರಕಿದೆ.
ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಗಿಗಳು ವಿಶ್ರಾಂತಿ ಪಡೆಯಲು ಅನೇಕ ವರ್ಷಗಳ ಹಿಂದೆ ಸುಸಜ್ಜಿತವಾದ ಉದ್ಯಾನ ನಿರ್ಮಿಸಿ, ಉತ್ತಮ ಹೂ ಗಿಡಗಳನ್ನು ನೀಡಲಾಗಿತ್ತು.
ನಂತರದ ವರ್ಷಗಳಲ್ಲಿ ಉದ್ಯಾನವು ನಿರ್ವಹಣೆ ಇಲ್ಲದೇ ಕಾಡು ಸೇರಿತ್ತು. ಯಾರು ಕೂಡ ಉದ್ಯಾನವನಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಮನಗಂಡ ಗೋಣಿಕೊಪ್ಪ ಯೂತ್ ವಿಂಗ್ನ ಯುವಕರು ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯರೊಂದಿಗೆ ಚರ್ಚೆ ನಡೆಸಿ ಪಾರ್ಕ್ ಶುಚಿಗೊಳಿಸುವುದಾಗಿ ಮನವಿ ಮಾಡಿದರು.
ವೈದ್ಯರು ನೀಡಿದ ಅನುಮತಿ ನಂತರ ಯುವಕರು ತಾವಾಗಿಯೇ ಆಗಮಿಸಿ ಉದ್ಯಾನವನದಲ್ಲಿ ಬೆಳೆದು ನಿಂತಿದ್ದ ಕುರುಚಲು ಗಿಡಗಳನ್ನು ಕಡಿದು ಶುಚಿಗೊಳಿಸಿದರು.
ಯುವಕರ ಸಮಾಜಮುಖಿ ಕಾರ್ಯಕ್ಕೆ ವೈದ್ಯಾಧಿಕಾರಿ ಡಾ. ಯತೀರಾಜ್, ಡಾ. ಗ್ರೀಷ್ಮ, ಡಾ. ಸುರೇಶ್ ಶ್ಲಾಘನೆ ವ್ಯಕ್ತಪಡಿಸಿದರು.
ಯೂತ್ ವಿಂಗ್ ಪ್ರಮುಖರಾದ ವಕೀಲ ಶಮೀರ್ ಮುಂದಾಳತ್ವದಲ್ಲಿ ಸದಸ್ಯರಾದ ಅಬ್ದುಲ್ ಸಮ್ಮದ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್ ಕಾಂತ್, ಸಲೀಂ, ಶಮ್ಮು, ಹಮೀದ್, ಖಾಲಿದ್, ಫೈಝಲ್, ಹನೀಫಾ, ರಿಯಾಸ್, ಸಜೀರ್, ಅಸ್ಗರ್, ರಂಶಾದ್, ಫಯಾಜ್, ಆಪು ಆಫ್ರಿದ್, ಮುಂತಾದವರು ಭಾಗವಹಿಸಿದ್ದರು. ಸ್ಥಳಿಯ ಗ್ರಾಮ ಪಂಚಾಯಿತಿಯ ಟ್ರಾö್ಯಕ್ಟರ್ ಸಹಾಯದಿಂದ ಅಪಾರ ರಾಶಿಯ ಕಸವನ್ನು ವಿಲೇವಾರಿ ಮಾಡಲಾಯಿತು.