ಮಡಿಕೇರಿ, ಜೂ. ೧೩: ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ ಎಂದು ಹೇಳಿ ಇದೀಗ ಪರೀಕ್ಷೆ ನಡೆಸುವುದಾಗಿ ಘೋಷಣೆ ಮಾಡಿರುವುದು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿ ರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ

ಕಳೆದ ೨ವರ್ಷಗಳಿಂದ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಮನೆ ಪಾಠದೊಂದಿಗೆ ಕಲಿಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕಾದ ಶಿಕ್ಷಣ ಇಲಾಖೆ ಆನ್ ಲೈನ್ ಪರೀಕ್ಷೆ ನಡೆಸುವ ಮೂಲಕ ಮಕ್ಕಳ ಮೇಲೆ ಕೋವಿಡ್ ಪರಿಣಾಮ ಬೀರುವುದ ರೊಂದಿಗೆ ಭವಿಷ್ಯವನ್ನು ಹಾಳು ಮಾಡಲು ಮುಂದಾಗಿದೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶವ್ಯಾಪಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ನಿಂದ ಮಕ್ಕಳು ಸೇರಿದಂತೆ ಸಾಮಾನ್ಯ ಜನರು ಅತ್ಯಂತ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು , ಕೋವಿಡ್ ನಿಯಂತ್ರಣದೊAದಿಗೆ ಮಕ್ಕಳಿಗೆ ಧೈರ್ಯ ತುಂಬಬೇಕಾದ ಇಲಾಖೆ ಅನಗತ್ಯವಾಗಿ ಮಕ್ಕಳಿಗೆ ಹೆಚ್ಚು ಹೊರೆ ಹೇರುವ ಮೂಲಕ ಮಾನಸಿಕವಾಗಿ ತೊಂದರೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ . ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ, ನೆಟ್ ವರ್ಕ್ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಾಮಾನ್ಯ ಜನರು ಕೂಲಿ ಕೆಲಸವೂ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಶಿಕ್ಷಣ ಇಲಾಖೆ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.