
ಗೋಣಿಕೊಪ್ಪಲು, ಜೂ. ೧೩: ವ್ಯಾಘ್ರನ ದಾಳಿಗೆ ಕರುವೊಂದು ಮೃತಪಟ್ಟಿದ್ದು, ದಕ್ಷಿಣ ಕೊಡಗಿನಲ್ಲಿ ಮತ್ತೆ ವ್ಯಾಘ್ರನ ಅಟ್ಟಹಾಸ ಕಂಡುಬರುತ್ತಿದೆ.
ಬೆಸಗೂರು ಗ್ರಾಮದ ಬಾಚಮಾಡ ಪ್ರಕಾಶ್ ರಾಜಪ್ಪ ಎಂಬವರ ಕೊಟ್ಟಿಗೆಯಲ್ಲಿದ್ದ ಕರುವನ್ನು ಹುಲಿ ಕೊಂದುಹಾಕಿದೆ. ರಾತ್ರಿ ೮.೩೦ ಸುಮಾರಿಗೆ ಮನೆಯ ಬಳಿ ಈ ಘಟನೆ ನಡೆದಿದೆ. ಇವರ ಭತ್ತದ ಗದ್ದೆ ಬಳಿ ಸಂಜೆ ವೇಳೆ ಹುಲಿ ಘರ್ಜನೆ ಮಾಡಿದ ಶಬ್ಧ (ಮೊದಲ ಪುಟದಿಂದ) ಇಲ್ಲಿನ ನಾಗರಿಕರಿಗೆ ಕೇಳಿಸಿದೆ. ಕೆಲವು ದಿನಗಳಿಂದ ಹುಲಿಯ ಕಾಟಕ್ಕೆ ರೈತರು, ಕುಟುಂಬಕ್ಕೆ ಆಸರೆಯಾಗಿರುವ ಹಸು, ಗಬ್ಬದ ಹಸು ಹಾಗೂ ಕರುಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ನಿರಂತರ ಹುಲಿ ದಾಳಿ ನಡೆಸುತ್ತಿರುವ ಬಗ್ಗೆ ಟಿ. ಶೆಟ್ಟಿಗೇರಿ ಬಿಜೆಪಿ ಮುಖಂಡರಾದ ಕಟ್ಟೆರ ಈಶ್ವರ್ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಈ ಭಾಗದಲ್ಲಿ ನಾಗರಿಕರಿಗೆ ತೊಂದರೆ ನೀಡುತ್ತಿರುವ ಹುಲಿಯನ್ನು ನಾಡಿನಿಂದ ಕಾಡಿಗೆ ಓಡಿಸುವ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.
ಅರಣ್ಯ ಅಧಿಕಾರಿಗಳಾದ ರಾಚಪ್ಪ ಹಾಗೂ ದಿವಾಕರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಹಜವಾಗಿಯೇ ನಾಗರಿಕರು ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹುಲಿ ಹಾವಳಿಯಿಂದ ಕೊಡಗಿನ ರೈತರನ್ನು ರಕ್ಷಿಸುವಂತೆ ಮನವಿ ಮಾಡಿದರು.
-ಹೆಚ್.ಕೆ. ಜಗದೀಶ್