ಸಿದ್ದಾಪುರ, ಜೂ. ೧೩: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ಹಾಡಿಯು ಕೊರೊನಾ ಮುಕ್ತ ಗ್ರಾಮವಾಗಿದೆ. ಚೆನ್ನಂಗಿ ಗ್ರಾಮದ ದಿಡ್ಡಳ್ಳಿ ಹಾಡಿಯಲ್ಲಿ ನೂರಾರು ಆದಿವಾಸಿ ಕುಟುಂಬಗಳು ವಾಸಮಾಡಿಕೊಂಡಿದ್ದಾರೆ.
ಈ ಭಾಗದಲ್ಲಿ ಈವರೆಗೂ ಒಂದು ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿರುವುದಿಲ್ಲವೆAದು ಆದಿವಾಸಿ ಹೋರಾಟಗಾರ್ತಿ ಜೆ.ಕೆ. ಮುತ್ತಮ್ಮ ತಿಳಿಸಿದರು. ೩೦೦ಕ್ಕೂ ಅಧಿಕ ಮಂದಿ ವಾಸಮಾಡಿಕೊಂಡಿರುವ ದಿಡ್ಡಳ್ಳಿ ಭಾಗದಲ್ಲಿರುವ ಆದಿವಾಸಿಗಳು ಕೂಲಿ ಕಾರ್ಮಿಕರಾಗಿದ್ದಾರೆ. ಆದರೆ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಕೆಲಸಕ್ಕೆ ತೆರಳದೇ ಸ್ಥಳೀಯ ಕಾಫಿ ತೋಟದೊಳಗೆ ತೆರಳುತ್ತಿದ್ದಾರೆ. ಕೆಲಸ ಇಲ್ಲದಿದ್ದರೆ ಮನೆಯಲ್ಲೇ ಕುಳಿತುಕೊಂಡು ಪಡಿತರ ಅಕ್ಕಿಗಳನ್ನು ಬಳಸಿಕೊಂಡು ಜೀವನ ಮಾಡುತ್ತಿದ್ದಾರೆಂದು ಮುತ್ತಮ್ಮ ಮಾಹಿತಿ ನೀಡಿದರು. ಹಾಡಿಯ ನಿವಾಸಿ ಜೇನುಕುರುಬರ ಸರಸು ಮಾತನಾಡಿ, ದಿಡ್ಡಳ್ಳಿ ವ್ಯಾಪ್ತಿಯ ಆದಿವಾಸಿಗಳು ಹೆಚ್ಚಾಗಿ ವಾಸ ಮಾಡುವ ಈ ಹಾಡಿಯ ನಿವಾಸಿಗಳು ಕೊರೊನಾ ಬಾರದಂತೆ ಕಾಡಿನಲ್ಲಿರುವ ಔಷಧಿ ಸೊಪ್ಪುಗಳನ್ನು ಹಾಗೂ ಶುಂಠಿ, ಕರಿಮೆಣಸು ಸೇರಿಸಿ ಕಷಾಯ ಮಾಡಿ ಕುಡಿಯುತ್ತಾರೆ. ಇದರಿಂದಾಗಿ ಶೀತ, ಜ್ವರ ಯಾವುದೂ ಬರುತ್ತಿಲ್ಲ. ಹಾಡಿಯ ನಿವಾಸಿಗಳು ಕೊರೊನಾದ ಬಗ್ಗೆ ಜಾಗೃತರಾಗಿದ್ದು, ಎಚ್ಚರಿಕೆಯಿಂದ ಇರುವ ಹಿನ್ನೆಲೆಯಲ್ಲಿ ದಿಡ್ಡಳ್ಳಿ ಹಾಡಿ ಕೊರೊನಾ ಮುಕ್ತವಾಗಿರುವ ಗ್ರಾಮವಾಗಿದೆ ಎಂದರು.
ಹಾಡಿಯ ಹಿರಿಯ ವೃದ್ಧ ೮೫ ವರ್ಷ ಪ್ರಾಯದ ಜೇನು ಕುರುಬರ ಮುತ್ತ ಮಾತನಾಡಿ, ಹಿಂದಿನ ಕಾಲದಲ್ಲಿ ನಾವುಗಳು ಗೆಡ್ಡೆ ಗೆಣಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದೆವು. ಆ ಸಂದರ್ಭದಲ್ಲಿ ಇಂತ ರೋಗ-ರುಜಿನಗಳು ಬರುತ್ತಿರಲಿಲ್ಲ. ಆದರೆ ಇದೀಗ ಕೊರೊನಾ ಎಂಬ ವಿಚಿತ್ರ ಕಾಯಿಲೆಗಳು ಬಂದು ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆAದು ಬೇಸರ ವ್ಯಕ್ತಪಡಿಸಿದರು. ನಮ್ಮ ಹಾಡಿಗೆ ಹೊರ ಊರುಗಳಿಂದ ಜನರು ಬರದಂತೆ ಹಾಡಿಯ ನಿವಾಸಿಗಳು ಎಚ್ಚರ ವಹಿಸು ತ್ತಿದ್ದೇವೆ. ದೇವರ ದಯೆಯಿಂದ ಈ ಭಾಗಕ್ಕೆ ಈವರೆಗೂ ಕೊರೊನಾ ಬಂದಿಲ್ಲ. ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು. - ವಾಸು.