ಕಡAಗ, ಜೂ. ೧೩: ಕೊರೊನಾ ಮಹಾಮಾರಿಯ ನಡುವೆ ಇಲ್ಲಿನ ಕೊಡಗು ಮುಸ್ಲಿಂ ಜಮಾಅತ್ ಸಂಘಟನೆಯ ಸಹಾಯ್ ತಂಡವು ಪ್ರಚಾರ ಬಯಸದೆ ಸದ್ದಿಲ್ಲದೆ ಹಲವು ಜನಪರ ಸೇವೆ ಮಾಡುತ್ತಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬದವರಿಗೆ ಆಹಾರ ಪದಾರ್ಥಗಳ ಕಿಟ್ ಹಾಗೂ ಹಲವು ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ, ಸೋಂಕಿತರಿಗೆ ಬೇಕಾಗಿರುವ ಅಗತ್ಯ ವಸ್ತುಗಳು, ಅನಾರೋಗ್ಯ ಪೀಡಿತ ಜನರನ್ನು ತಮ್ಮ ವಾಹನಗಳಲ್ಲಿ ಆಸ್ಪತ್ರೆ ಸಾಗಿಸುವುದು, ಕೊರೊನಾ ಸೋಂಕಿತ ಮರಣ ಹೊಂದಿದ ವ್ಯಕ್ತಿಯ ಅಂತಿಮ ಕರ್ಮಗಳನ್ನೂ ನೆರವೇರಿಸುವುದು ಮತ್ತು ನಾನಾ ರೀತಿಯ ಸೇವೆಗಳು ಮಾಡುತ್ತಾ ಪ್ರಚಾರ ಬಯಸದೆಯೇ ಸಹಾಯ್ ಸಂಘಟನೆಯ ಸದಸ್ಯರುಗಳು ಹಗಲು - ರಾತ್ರಿ ಶ್ರಮಿಸುತ್ತಿದ್ದಾರೆ.

ಈವರೆಗೆ ಸಹಾಯ್ ಸಂಘಟನೆ ಕೊಡಗಿನ ಎಲ್ಲಾ ಭಾಗಗಳಲ್ಲೂ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬದವರಿಗೆ ಬೇಕಾಗಿರುವ ಅಗತ್ಯ ವಸ್ತುಗಳು ಮತ್ತು ಅವರಿಗೆ ಬೇಕಾಗಿರುವ ಹಲವು ಸೇವೆಗಳನ್ನು ಮಾಡುತ್ತಾ ಬಂದಿದ್ದು, ಮುಂದೆಯೂ ಇದೇ ರೀತಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರಿಗೆ ಸಹಾಯ ಮಾಡುತ್ತೇವೆ ಎಂದು ಸಹಾಯ್ ಸಂಘಟನೆಯ ಪ್ರಮುಖರಾದ ಉಮ್ಮರ್ ಸಖಾಫಿ, ಲತೀಫ್ ಅವರು ತಿಳಿಸಿದ್ದಾರೆ.

ಕೊಡಗಿನಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಹಲವು ಅನಾಹುತಗಳು ಸಂಭವಿಸಿದ್ದೂ ಸಂದರ್ಭದಲ್ಲಿ ಕೂಡ ಸಹಾಯ್ ಸಂಘಟನೆಯು ಎಚ್ಚೆತ್ತುಕೊಂಡಿತ್ತು. ಎಲ್ಲಾ ಭಾಗದ ಜನರಿಗೆ ಸಹಾಯ ಮಾಡಲು ಈಗಾಗಲೇ ಎಸ್‌ಎಸ್‌ಎಫ್ ಯುವಕರ ತಂಡವನ್ನು ಕಟ್ಟಿ ಕೊಂಡಿದ್ದಾರೆ. ಜಿಲ್ಲೆಯ ಜನರಿಗೆ ಯಾವುದೇ ಸಂದರ್ಭದಲ್ಲಿಯೂ ಕೂಡ ಸಹಾಯ ಅವಶ್ಯಕತೆ ಇದ್ದಲ್ಲಿ ಸಹಾಯ್ ಸಂಘಟನೆಯು ಸದಾ ಜನ ಸೇವೆಗೆ ಸಿದ್ಧವಿದೆ ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.

- ನೌಫಲ್ ಎಂ.ಬಿ., ಕಡಂಗ