ಚೆಟ್ಟಳ್ಳಿ, ಜೂ. ೧೩: ಚೆಟ್ಟಳ್ಳಿ ಸಮೀಪದ ಅಬ್ಯಾಲದ ಮುರ್ಕೀನ್ ತೋಟದಲ್ಲಿ ಬೆಳೆದ ೫೫ ಕೆಜಿ ತೂಕದ ಹಲಸಿನ ಹಣ್ಣೊಂದು ಗಿನ್ನಿಸ್ ದಾಖಲೆಯತ್ತ ಸಾಗಿದೆ.
ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹಲವು ಸಾಧನೆಯಿಂದ ಹಿಡಿದು ಪ್ರಕೃತಿವಿಸ್ಮಯದ ವಿಷಯಗಳು ಸೇರಿಕೊಳ್ಳುತ್ತವೆ. ಹಾಗೇ ೪೨.೭೩ ಕೆ.ಜಿ. ತೂಕ ಹಾಗೂ ೫೭.೧೫ ಸೆ.ಮಿ. ಉದ್ದದ ಹಲಸಿನ ಹಣ್ಣು ವಿಶ್ವದಾಖಲೆಯ ಗಿನ್ನಿಸ್ ಪುಸ್ತಕದಲ್ಲಿ ಸೇರಿವೆ. ಇದನ್ನು ಮನಗಂಡ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಅಬ್ಯಾಲದ ಮುರ್ಕೀನ್ ತೋಟದ ಮಾಲೀಕ ಸಿದ್ದಾರ್ಥ್ ಜೋಸೆಫ್ ಮುರ್ಕೀನ್ ಹಾಗೂ ಸಹೋದರ ಗೌತಮ್ ಆಂಟೋನಿ ಮುರ್ಕೀನ್ ತನ್ನ ತೋಟದಲ್ಲಿ ಬೆಳೆದ ಹಲಸಿನ ಹಣ್ಣನ್ನು ತೂಕ ಮಾಡಿದಾಗ ೫೫.೫ ಕೆ.ಜಿ. ತೂಕ ಹಾಗೂ ೮೨ ಸೆ.ಮಿ. ಉದ್ದವಿರುವುದನ್ನು ಮಾಹಿತಿ ಸಹಿತ ತಾಯಿ ವಿನಿತ ಮೋಹನ್ ಜೋಸೆಫ್ ಅವರ ಹೆಸರಿನಲ್ಲಿ ಗಿನ್ನಿಸ್ ದಾಖಲೆಗೆ ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ.
ಸಿದ್ದಾರ್ಥ್ ಅವರ ತಾತ ಎಂ.ಜೆ. ಜೋಜೆಫ್ ಸುಮಾರು ೨೦-೨೫ ವರ್ಷದ ಹಿಂದೆ ಕೇರಳದ ಕ್ಯಾಲಿಕಟ್ನಿಂದ ಅಬ್ಯಾಲದ ಮುರ್ಕೀನ್ ತೋಟದಲ್ಲಿ ಮೂರು ನಾಲ್ಕು ಹಲಸಿನ ಗಿಡವನ್ನು ತಂದು ನೆಟ್ಟು ಬೆಳೆಸಿದರು. ಕಳೆದ ೧೫ ವರ್ಷಗಳಿಂದ ಫಸಲು ನೀಡುತ್ತಿದ್ದು, ಪ್ರತಿ ವರ್ಷವೂ ಒಂದು ಮರದಲ್ಲಿ ಬೃಹತ್ತಾದ ಒಂದೇ ಒಂದು ಹಲಸಿನ ಹಣ್ಣು ಬಿಡುತ್ತಿದೆ. ಈ ವರ್ಷ ಫಸಲಿಗೆ ಬಂದ ಹಲಸಿನ ಹಣ್ಣನ್ನು ತೋಟದ ಮಾಲೀಕ ಸಿದ್ದಾರ್ಥ್ ತೂಕ ಮಾಡಿದಾಗ ಗಿನ್ನಿಸ್ ದಾಖಲೆಗೊಂಡ ವಿಶ್ವದ ಹಲಸಿನ ಹಣ್ಣಿಗಿಂತ ಸುಮಾರು ೧೩ ಕೆ.ಜಿ. ಹೆಚ್ಚಿನ ತೂಕ ಇರುವುದನ್ನು ಅರಿತು ಫೋಟೊ ಕ್ಲಿಕ್ಕಿಸಿ ಮಾಹಿತಿ ಸಮೇತವಾಗಿ ತನ್ನ ಸ್ನೇಹಿತ ಅಭಿನಯ್ ತಿಮ್ಮಯ್ಯ ಸಾಕ್ಷಿಯಾಗಿ ಮೇ ೧೪ ರಂದು ಗಿನ್ನಿಸ್ ದಾಖಲೆಯ ವೆಬ್ಸೈಟ್ಗೆ ಅಪ್ಲೋಡ್ ಮಾಡಿ ದ್ದಾರೆ. ಮೂರು ತಿಂಗಳಲ್ಲಿ ಮಾಹಿತಿಯನ್ನು ಪರಿಶೀಲಿಸಿ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳ್ಳಲಿದೆ ಎಂದು ಸಿದ್ದಾರ್ಥ್ ಜೋಸೆಫ್ ಮುರ್ಕೀನ್ ಹಾಗೂ ಸಹೋದರ ಗೌತಮ್ ಆಂಟೋನಿ ಮುರ್ ಕೀನ್ ಹೇಳುತ್ತಾರೆ.
-ಪುತ್ತರಿರ ಕರುಣ್ಕಾಳಯ್ಯ