ಮಡಿಕೇರಿ, ಜೂ. ೧೩: ಪಿ.ಯು.ಸಿ ಎಕ್ಸಾಮ್ ನಡೆಸಿದರೆ, ಕೊರೊನಾ ಬರುತ್ತೆ ಅಂತೆ, ಆದ್ದರಿಂದ ಪರೀಕ್ಷೆಯನ್ನು ರದ್ದುಗೊಳಿಸಿದ್ದಾರೆ.
ನಮಗೆ ಪರೀಕ್ಷೆ ನಡೆಸಬಹುದು? ನಮಗೆ ಕೊರೊನಾ ಬರಲ್ವಾ? ನಮ್ಮ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಯಾಕೆ ಕಾಳಜಿಯಿಲ್ಲ? ಈ ಎಲ್ಲಾ ಮಾತುಗಳು, ಪ್ರಶ್ನೆಗಳು ಪದವಿ ವಿದ್ಯಾರ್ಥಿಗಳು ಸರ್ಕಾರದ ಮುಂದಿಟ್ಟಿದ್ದಾರೆ.
ಕೊರೊನಾ ಎರಡನೇ ಅಲೆ ಯಿಂದ ಲಾಕ್ಡೌನ್ ಘೋಷಿಸಿದ ಕಾರಣದಿಂದಾಗಿ ಶಾಲಾ-ಕಾಲೇಜುಗಳಿಗೆ ಅರ್ಧದಲ್ಲೇ ಮತ್ತೆ ಬೀಗ ಬಿದ್ದಿವೆ.
ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ನಿಂದ ಪರೀಕ್ಷೆ ನಡೆಸಲು ಅಸಾಧ್ಯ ಎಂದು ಹೇಳಿ, ಸರ್ಕಾರ ದ್ವಿತೀಯ ಪಿ.ಯು.ಸಿ. ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲಾ ವಿದ್ಯಾರ್ಥಿ ಗಳನ್ನು ಉತ್ತೀರ್ಣಗೊಳಿಸಿದೆ.
ಕೊರೊನಾ ಸೋಂಕಿನಿAದ ಘೋಷಿಸಿರುವ ಲಾಕ್ಡೌನ್ನಿಂದ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ ಎನ್ನಬಹುದು. ಕೊರೊನಾ ಮೊದಲನೇ ಅಲೆ ನಿಯಂತ್ರಣಕ್ಕೆ ಬಂದು, ಪದವಿ ಕಾಲೇಜುಗಳನ್ನು ತೆರೆಯಲು ಕಳೆದ ವರ್ಷ ನವೆಂಬರ್ ೧೭ ರಿಂದ ಸರ್ಕಾರ ಅನುಮತಿ ನೀಡಿತು. ಆದರೂ ಸಹಾ ಬಹುತೇಕ ವಿದ್ಯಾರ್ಥಿಗಳು ಕೋವಿಡ್ ಭಯದಿಂದ ಕಾಲೇಜುಗಳತ್ತ ಮುಖಮಾಡಿರಲಿಲ್ಲ. ಆನ್ಲೈನ್ ತರಗತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು.
ಈ ವರ್ಷ ಜನವರಿ ತಿಂಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ಭೌತಿಕ (ಆಫ್ಲೈನ್) ತರಗತಿಗಳು ಪ್ರಾರಂಭವಾಗಿತ್ತು. ಎರಡು ತಿಂಗಳ ಕಾಲ ಪದವಿ ತರಗತಿಗಳು ಸುಗಮವಾಗಿ ನಡೆದು, ಮೊದಲನೇ ಸೆಮಿಸ್ಟರ್, ಮೂರನೇ ಸೆಮಿಸ್ಟರ್ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯ ತೀರ್ಮಾನಿಸಿ, ಅದರಂತೆ ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ಆರಂಭಗೊAಡು, ವ್ಯಾಪಕವಾಗಿ ಹರಡುತ್ತಿದ್ದ, ಕೋವಿಡ್ ಎರಡನೆಯ ಅಲೆಯನ್ನು ನಿಯಂತ್ರಿಸಲು ಜಾರಿಯಲ್ಲಿರುವ ಲಾಕ್ಡೌನ್ನಿಂದ ಅರ್ಧದಲ್ಲೇ ಪದವಿ ಪರೀಕ್ಷೆಗಳು ನಿಂತುಹೋಗಿದೆ.
ಎಕ್ಸಾಮ್ ಮುಗಿದಿಲ್ಲ ಅಷ್ಟರಲ್ಲೇ ಆನ್ಲೈನ್ ಕ್ಲಾಸ್
ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಒಳಪಡುವ ಜಿಲ್ಲೆಯ ಪದವಿ ಕಾಲೇಜಿನ ಮೊದಲನೇ, ಮೂರನೇ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು ಅರ್ಧದಲ್ಲೇ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿವೆ. ಇದೀಗ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಎರಡನೇ, ನಾಲ್ಕನೇ ಹಾಗೂ ಅಂತಿಮ ಸೆಮಿಸ್ಟರ್ ಆನ್ಲೈನ್ ತರಗತಿಗಳನ್ನು ಕಳೆದ ಮೇ ೧೦ ರಿಂದ ನಡೆಸಲು ಆದೇಶ ನೀಡಲಾಗಿದ್ದು, ಈ ಆದೇಶದಂತೆ ಜಿಲ್ಲೆಯ ಪದವಿ ಕಾಲೇಜುಗಳು ಆನ್ಲೈನ್ ತರಗತಿಗಳನ್ನು ನಡೆಸುತ್ತಿವೆ.
ಪರೀಕ್ಷೆಗಳು ಬಾಕಿ ಉಳಿದಿವೆ. ಇದರ ಮಧ್ಯೆ ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್ಲೈನ್ ಮುಖಾಂತರ ನಡೆಸುತ್ತಿರುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮಗೆ ಇನ್ನೂ ಮೂರು-ನಾಲ್ಕು ಪರೀಕ್ಷೆಗಳು ಬಾಕಿ ಉಳಿದಿವೆ. ಇದೀಗ, ಮೂರನೇ ಸೆಮಿಸ್ಟರ್ ತರಗತಿ ಪ್ರಾರಂಭಿಸಲಾಗಿದೆ. ನಾವು ಬಾಕಿಯಿರುವ ಪರೀಕ್ಷಾ ವಿಷಯಗಳ ಬಗ್ಗೆ ಓದಬೇಕೆ? ಅಥವಾ ಈಗ ಮುಂದಿನ ಸೆಮಿಸ್ಟರ್ ಪಾಠವನ್ನು ಓದಬೇಕೆ? ಎಂದು ಪದವಿ ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದ್ದಾಳೆ.
ಆನ್ಲೈನ್ ತರಗತಿ: ನೆಟ್ವರ್ಕ್ ಸಮಸ್ಯೆ
ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಒಳಪಡುವ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು, ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಕಳೆದ ಒಂದು ತಿಂಗಳಿನಿAದ ನಡೆಸುತ್ತಿದ್ದಾರೆ.
ಕೊಡಗು ಗುಡ್ಡಗಾಡು ಪ್ರದೇಶವಾದ ಕಾರಣ ಎಲ್ಲೆಡೆ ನೆಟ್ವರ್ಕ್ ಸಮಸ್ಯೆ ಇದೆ. ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಯಲ್ಲಿ ಪಾಲ್ಗೊಳ್ಳಲು ತೊಡಕಾಗುತ್ತಿದೆ. ಈ ಕಾರಣದಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಆನ್ಲೈನ್ ತರಗತಿಯಿಂದ ವಂಚಿತರಾಗಿದ್ದಾರೆ.
‘ನಮ್ಮನ್ನೂ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ’
ಕಳೆದ ವರ್ಷ ಮಂಗಳೂರು ವಿಶ್ವ ವಿದ್ಯಾನಿಲಯವು, ಎರಡನೇ, ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ತೇರ್ಗಡೆಗೊಳಿಸಿತ್ತು.
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಯನ್ನು ನಡೆಸಲಾಗಿತ್ತು.
ಇದೀಗ ಕಳೆದ ವರ್ಷದ ಮಾದರಿಯಲ್ಲಿ ನಮ್ಮನ್ನೂ ಪಾಸ್ ಮಾಡಿ ಹಾಗೂ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸದೆ ತೇರ್ಗಡೆ ಗೊಳಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಕೇಳಿಬರುತ್ತಿರುವ ಮಾತು.
ಸದ್ಯಕ್ಕೆ ಕಾಲೇಜು ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ
ಪದವಿ ಕಾಲೇಜುಗಳು ಸದ್ಯಕ್ಕೆ ಆರಂಭವಾಗುವುದು ಅನುಮಾನ ವಾಗಿದೆ. ಇದೀಗ ಎರಡನೇ, ನಾಲ್ಕನೇ ಸೆಮಿಸ್ಟರ್ ಹಾಗೂ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿ ಗಳನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ತೇರ್ಗಡೆಗೊಳಿಸಿ, ಕೊರೊನಾ ಹತೋಟಿಗೆ ಬಂದ ನಂತರ ಪದವಿ ಆಫ್ಲೈನ್ ತರಗತಿ ಗಳನ್ನು ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ. ವಿದ್ಯಾರ್ಥಿ ಗಳಲ್ಲಿರುವ ಗೊಂದ ಲಕ್ಕೆ ಸರ್ಕಾರ ಹಾಗೂ ವಿಶ್ವ ವಿದ್ಯಾನಿಲಯ ತೆರೆ ಎಳೆಯಬೇಕಾಗಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ