ಮಡಿಕೇರಿ, ಜೂ. ೧೨: ನಗರದ ರಾಜಾಸೀಟು ಬಳಿ ನೂತನವಾಗಿ ನಿರ್ಮಿಸಿರುವ ಕೂರ್ಗ್ ವಿಲೇಜ್ ಮಳಿಗೆಗಳನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.

ಏಲಕ್ಕಿ, ಕರಿಮೆಣಸು ಮತ್ತಿತರ ಸಾಂಬಾರ ಪದಾರ್ಥಗಳ ಮಳಿಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೂರ್ಗ್ ವಿಲೇಜ್ ಆಕರ್ಷಣೀಯವಾಗಿದ್ದು, ಕೂರ್ಗ್ ವಿಲೇಜ್‌ನ್ನು ೯೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ೧೪ ಮಳಿಗೆಗಳನ್ನು ಒಳಗೊಂಡಿದ್ದು, ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಬಳಿಕ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟರು. ಬಳಿಕ ಅಲ್ಲಿರುವ ಕೆರೆಗೆ ಮೀನುಮರಿ ಬಿಡಲಾಯಿತು.

ಆ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಕೋವಿಡ್-೧೯ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಮೂರನೇ ಅಲೆಯನ್ನು ನಿಯಂತ್ರಿಸಲು ಕ್ರಮವಹಿಸಲಾಗಿದೆ ಎಂದರು.

ಬಳಿಕ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣದ ಕಾಮಗಾರಿ ಪರಿಶೀಲಿಸಿದರು. ನಂತರ ಕೋವಿಡ್ ಆರೈಕೆ ಕೇಂದ್ರದಲ್ಲಿರುವವರಿಗೆ ಪ್ರತ್ಯೇಕವಾಗಿ ನಿರ್ಮಿಸಿರುವ ನೂತನ ಶೌಚಾಲಯ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕಾರ್ಯಪ್ಪ, ಆಡಳಿತಾಧಿಕಾರಿ ಡಾ. ನಂಜುAಡೇಗೌಡ, ಅಧೀಕ್ಷಕ ಡಾ. ಮಂಜುನಾಥ್, ಪಾಂಶುಪಾಲ ಡಾ. ವಿಶಾಲ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಇತರರು ಇದ್ದರು.