ಮಡಿಕೇರಿ, ಜೂ.೧೦: ೨೦೨೧-೨೨ ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಕೊಡಗು ಜಿಲ್ಲೆಯ ಎಲ್ಲಾ ೩ ತಾಲೂಕುಗಳಲ್ಲಿ ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಗಳಾದ ಕಾಳು ಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಅನುಷ್ಠಾನ ಗೊಳಿಸಲಾಗುತ್ತಿದೆ.

ಹವಾಮಾನ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಮತ್ತಿತರ ಮಾಹಿತಿಯನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ. ಈ ಯೋಜನೆಯ ವಿಮೆ ನೋಂದಣಿ ಜೂನ್ ೩೦ ಕೊನೆಯ ದಿನವಾಗಿದೆ.

೨೦೨೧-೨೨ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಹಾಗೂ ಕಂತಿನ ವಿವರ ಇಂತಿದೆ: ಕಾಳುಮೆಣಸು ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ ರೂ. ೪೭,೦೦೦, ಪ್ರತಿ ಹೆಕ್ಟೇರ್ ಗೆ ವಿಮಾ ಕಂತು(ಶೇ.೩೦) ರೂ.೧೪,೧೦೦, ರೈತರು ಪಾವತಿಸಬೇಕಾಗಿರುವ ಕಂತು (ಶೇ.೫) ರೂ. ೨,೩೫೦ ಗಳಾಗಿದೆ.

ಅಡಿಕೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. ೧,೨೮,೦೦೦, ಪ್ರತಿ ಹೆಕ್ಟೇರ್ ಗೆ ವಿಮಾ ಕಂತು(ಶೇ.೩೦) ರೂ. ೩೮,೪೦೦, ರೈತರು ಪಾವತಿಸಬೇಕಾಗಿರುವ ಕಂತು (ಶೇ.೫) ರೂ. ೬,೪೦೦ ಗಳಾಗಿದೆ.

ಹೆಚ್ಚಿನ ಮಾಹಿತಿಗೆ ರೈತರು ಕೂಡಲೇ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು, ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಶಶಿಧರ ರೈತರಿಗೆ ಕೋರಿದ್ದಾರೆ.