ಕುಶಾಲನಗರ, ಜೂ.೧೧: ಕುಶಾಲನಗರ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಅಂದಾಜು ೬೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರವಾಸಿಗರ ಉಪಾಹಾರ ಗೃಹ ಮಂದಿರ, ಪಕ್ಷಿ ಕೇಂದ್ರ ಮತ್ತು ಕುಟೀರಗಳನ್ನು ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾವೇರಿ ನಿಸರ್ಗ ಧಾಮವನ್ನು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತಹAತವಾಗಿ ಅಭಿವೃದ್ಧಿ ಗೊಳಿಸಲು ಯೋಜನೆ ರೂಪಿಸಲಾಗುತ್ತದೆ ಎಂದರು. ಪ್ರವಾಸಿ ಕೇಂದ್ರದ ಅಭಿವೃದ್ಧಿ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತ ಸೋಮಲ್, ತಹಶೀಲ್ದಾರ್ ಗೋವಿಂದ ರಾಜು, ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ತಖತ್ ಸಿಂಗ್ ರಣಾವತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ವನ್ಯಜೀವಿ ವಿಭಾಗದ ಶಿವರಾಂ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಅನನ್ಯ ಕುಮಾರ್, ಮತ್ತಿತರರು ಇದ್ದರು.