ಮಡಿಕೇರಿ, ಜೂ.೧೧ : ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪ್ರಮುಖರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ ೨೦ ಬಾರಿ ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಮಾತನಾಡಿ, ಕೇಂದ್ರ ಸರ್ಕಾರ ನಿರಂತರವಾಗಿ ಜನ ವಿರೋಧಿ ನೀತಿಗಳನ್ನೇ ಅನುಸರಿಸುತ್ತಿದೆ ಎಂದು ಟೀಕಿಸಿದರು. ಹೋರಾಟದ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ ಇನ್ನು ಮುಂದೆಯೂ ಮಾಡಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.
ಪಕ್ಷದ ಪ್ರಮುಖರಾದ ಟಿ.ಪಿ. ರಮೇಶ್, ಟಿ.ಎಂ. ಶಾಹಿದ್, ಐ.ಜಿ.ಚಿಣ್ಣಪ್ಪ, ಸುಜು ತಿಮ್ಮಯ್ಯ, ಬಿ.ವೈ.ರಾಜೇಶ್, ಎಂ.ಎ.ಉಸ್ಮಾನ್, ಸೂರಜ್ ಹೊಸೂರು, ಕೆ.ಯು.ಅಬ್ದುಲ್ ರಜಾಕ್, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ಚಂದ್ರಶೇಖರ್ ಆರ್.ಪಿ, ಅಂಬೆಕಲ್ ನವೀನ್ ಕುಶಾಲಪ್ಪ, ಹನೀಫ್ ಸಂಪಾಜೆ, ಶಾಫಿ ಕೊಟ್ಟಮುಡಿ, ಇಸ್ಮಾಯಿಲ್, ಮುನೀರ್ ಅಹಮ್ಮದ್ ಎಸ್.ಐ, ತೆನ್ನಿರ ಮೈನಾ, ಪ್ರಭು ರೈ, ನಂದಿನೆರವAಡ ಮಧು, ತಮ್ಮಯ್ಯ ವೈ.ಪಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಐಎನ್ಟಿಸಿ ಕಾರ್ಯಕರ್ತರ ಪ್ರತಿಭಟನೆ
ಹೆಬ್ಬಾಲೆ : ಪೆಟ್ರೋಲ್ ಹಾಗೂ ಡೀಸೆಲ್ ಸೇರಿದಂತೆ ತೈಲ ಬೆಲೆಗಳ ಏರಿಕೆ ಖಂಡಿಸಿ ಶುಕ್ರವಾರ ಐಎನ್ಟಿಸಿ ವತಿಯಿಂದ ಹೆಬ್ಬಾಲೆ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಯಿತು.
ಐಎನ್ಟಿಸಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಹೆಚ್.ಜೆ. ತ್ರಿನೇಶ್ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಪೆಟ್ರೋಲ್ ಬಂಕ್ ಮುಂಭಾಗ ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಸಂಕಷ್ಟದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರನ್ನು ತೀವ್ರ ತೊಂದರೆಗೆ ಸಿಲುಕಿಸಲಾಗಿದೆ.
ಆ್ಯಂಬ್ಯುಲೆನ್ಸ್ಗಳಿಗೂ ಪೆಟ್ರೋಲ್ ಹಾಕದ ಸ್ಥಿತಿ ಇದೆ ಎಂದು ತ್ರಿನೇಶ್ ದೂರಿದರು. ಎರಡು ಚಕ್ರ ವಾಹನದ ಮೇಲೆ ಬಿಳಿ ಬಟ್ಟೆ ಹಾಸುವ ಮೂಲಕ ಅಣಕು ಪ್ರದರ್ಶನ ನಡೆಸಿದರು. ಈ ಸಂದರ್ಭ ಐಎನ್ಟಿಸಿ ಸಂಘಟನೆಯ ಮುಖಂಡರಾದ ವಿ.ಜಿ. ರವಿ, ಚಂದನ್, ಪುನೀತ್, ಸಿದ್ದಾರ್ಥ, ಕಿರಣ್, ಕಾರ್ಯಕರ್ತರು ಪಾಲ್ಗೊಂಡಿದ್ದರು.