ರಾಜ್ಯದಲ್ಲಿ ಕೊರೊನಾ ಇಳಿಮುಖ
ಬೆಂಗಳೂರು, ಜೂ. ೧೧: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಇಂದು ೮,೨೪೯ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೪೭,೫೩೯ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೫೯ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೨,೬೪೪ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೧,೧೫೪ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೧,೯೨,೮೮೬ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೪೮ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೧೪,೯೭೫ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೫,೧೧,೧೦೫ಕ್ಕೆ ಏರಿಕೆಯಾಗಿದೆ. ೨,೦೩,೭೬೯ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೬೯,೬೯೫ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೮,೨೪೯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೪.೮೬ಕ್ಕೆ ಇಳಿದಿದೆ. ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ ೧,೧೫೪, ಬೆಳಗಾವಿಯಲ್ಲಿ ೪೩೬, ಬಳ್ಳಾರಿಯಲ್ಲಿ ೧೮೯, ಚಿಕ್ಕಬಳ್ಳಾಪುರದಲ್ಲಿ ೧೬೮, ಚಿಕ್ಕಮಗಳೂರು ೩೩೨, ದಕ್ಷಿಣ ಕನ್ನಡದಲ್ಲಿ ೫೦೬, ದಾವಣಗೆರೆಯಲ್ಲಿ ೨೬೦, ಹಾಸನದಲ್ಲಿ ೭೩೩, ಮೈಸೂರಿನಲ್ಲಿ ೮೧೭, ಶಿವಮೊಗ್ಗದಲ್ಲಿ ೪೨೯, ತುಮಕೂರಿನಲ್ಲಿ ೫೭೬, ಉಡುಪಿಯಲ್ಲಿ ೨೧೫, ಉತ್ತರ ಕನ್ನಡದಲ್ಲಿ ೩೧೧ ಪ್ರಕರಣಗಳು ವರದಿಯಾಗಿವೆ. ಕಳೆದ ೨೪ ತಾಸಿನಲ್ಲಿ ಸೋಂಕಿನಿAದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ ೪೮, ಗ್ರಾಮಾಂತರದಲ್ಲಿ ೬, ಶಿವಮೊಗ್ಗ ೭, ಹಾವೇರಿ ೧೦, ಧಾರವಾಡದಲ್ಲಿ ೯, ಮೈಸೂರಿನಲ್ಲಿ ೨೦ ಪ್ರಕರಣಗಳು ಸೇರಿವೆ.
ಕವಿ ಡಾ. ಸಿದ್ಧಲಿಂಗಯ್ಯ ನಿಧನ
ಬೆಂಗಳೂರು, ಜೂ. ೧೧: ಕಳೆದೊಂದು ತಿಂಗಳಿAದ ಕೋವಿಡ್ ಸೋಂಕಿನಿAದ ಬಳಲುತ್ತಿದ್ದ ಕವಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ (೬೬) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಇವರು ಮಣಿಪಾಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ದಲಿತರ ಧ್ವನಿಯಾಗಿದ್ದ ಸಿದ್ದಲಿಂಗಯ್ಯ, ದಲಿತ ಬಂಡಾಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ರಾಜ್ಯದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಸಾಮಾಜಿಕ ಸಮಾನತೆಯ ಕವನ ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದ ಸಿದ್ದಲಿಂಗಯ್ಯ ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರ ಕವಿತೆಗಳು, ಸಮಕಾಲೀನ ಕನ್ನಡ ಕವಿತೆ ಭಾಗ-೩,೪ (ಸಂಪಾದನೆ ಇತರರೊಂದಿಗೆ), ಏಕಲವ್ಯ, ನೆಲಸಮ, ಪಂಚಮ, ಸದನದಲ್ಲಿ ಸಿದ್ದಲಿಂಗಯ್ಯ ಭಾಗ ೧ ಮತ್ತು ಭಾಗ ೨, ಆತ್ಮಕಥೆಯಾದ ಊರುಕೇರಿ- ಭಾಗ-೧ ಮತ್ತು ಬಾಗ ೨ ಸೇರಿ ಅನೇಕ ಕೃತಿಗಳನ್ನು ಸಿದ್ದಲಿಂಗಯ್ಯ ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದ್ದ ಸಿದ್ದಲಿಂಗಯ್ಯನವರು ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ನವದೆಹಲಿ, ಜೂ. ೧೧: ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ದೇಶದ ವಿವಿಧೆಡೆ ಪೆಟ್ರೋಲ್ ಬಂಕ್ಗಳ ಬಳಿ ಪ್ರತಿಭಟನೆ ನಡೆಸಿದರು. ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ್ ಮತ್ತು ಶಕ್ತಿ ಸಿಂಗ್ ಗೋಹಿಲ್ ಕುದುರೆ ಗಾಡಿಯಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪೆಟ್ರೋಲ್ ಬಂಕ್ ತಲುಪಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ರೂ. ೯.೨೦ ಪೈಸೆ ಇದದ್ದು, ಇದೀಗ ರೂ. ೩೨ ತಲುಪಿದೆ ಎಂದು ವೇಣುಗೋಪಾಲ್ ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಶುಂಕ ಹಾಕುವುದನ್ನು ಸರ್ಕಾರ ನಿಲ್ಲಿಸಬೇಕು, ಇದು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರಬೇಕು. ಇಂಧನ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕೆಂದು ವೇಣುಗೋಪಾಲ್ ಹೇಳಿದರು. ಅಜಯ್ ಮಾಕೆನ್ ನೇತೃತ್ವದಲ್ಲಿ ರಾಜಿಂದರ್ ನಗರ ಮತ್ತು ಜನಪಥ್ನಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಯಿತು. ಈ ಮಧ್ಯೆ ಬಿಜೆಪಿ ಲೂಟಿಂಗ್ ಇಂಡಿಯಾ ಹ್ಯಾಷ್ಟಾಗ್ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಜಿಡಿಪಿ ಕುಸಿತ, ನಿರುದ್ಯೋಗ ಹೆಚ್ಚಳ, ಗಗನಕ್ಕೇರುತ್ತಿರುವ ತೈಲ ಬೆಲೆ, ಬಿಜೆಪಿ ದೇಶದಲ್ಲಿ ಲೂಟಿ ಮಾಡಲು ಇನ್ನೂ ಎಷ್ಟು ಮಾರ್ಗಗಳಿವೆ ಎಂದು ಕೇಳಿದ್ದಾರೆ. ಶುಕ್ರವಾರ ಪೆಟ್ರೋಲ್ ಬೆಲೆ ಮತ್ತೆ ೩೧ ಪೈಸೆ, ಡೀಸೆಲ್ ಬೆಲೆ ೨೮ ಪೈಸೆಗೆ ಹೆಚ್ಚಳವಾಗಿದೆ. ಅಬಕಾರಿ ಸುಂಕವನ್ನು ಕಡಿತ ಮಾಡುವ ತೈಲ ಬೆಲೆಯಲ್ಲಿ ಕನಿಷ್ಟ ೨೫ ರೂಪಾಯಿಯಾದರೂ ಕಡಿಮೆ ಮಾಡಿ ಎಂದು ಭೂಪಾಲ್ನಲ್ಲಿ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದರು. ಈ ಮಧ್ಯೆ ತಮಿಳು ನಾಡು ಕಾಂಗ್ರೆಸ್ ಅಧ್ಯಕ್ಷ ಕೆಎಸ್ ಅಳಗಿರಿ ನೇತೃತ್ವದಲ್ಲಿ ಚೆನ್ನೆöÊನಲ್ಲಿ ಪ್ರತಿಭಟನೆ ನಡೆಯಿತು. ಪಂಜಾಬ್, ರಾಜಸ್ಥಾನ, ಕೇರಳ, ಛತ್ತೀಸ್ಗಢ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ತೈಲ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಕೂಲಿ ಕಾರ್ಮಿಕರ ಸೋಗಿನಲ್ಲಿ ನೆಲೆಸಿದ್ದ ಶ್ರೀಲಂಕಾ ಪ್ರಜೆಗಳ ಬಂಧನ
ಮAಗಳೂರು, ಜೂ. ೧೧: ಶುಕ್ರವಾರದಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಕಾರಣ ೩೮ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆಯುಕ್ತರು, ಮೂವತ್ತೆಂಟು ಶ್ರೀಲಂಕಾದ ಪ್ರಜೆಗಳು ಶ್ರೀಲಂಕಾದಿAದ ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿ ಒಂದು ತಿಂಗಳ ಹಿಂದೆ ಮಂಗಳೂರು ತಲುಪಿದ್ದರು. ಅವರು ಕಳೆದ ಒಂದೂವರೆ ತಿಂಗಳಿನಿAದ ಎರಡು ಲಾಡ್ಜ್ಗಳು ಮತ್ತು ಎರಡು ಮನೆಗಳಲ್ಲಿ ತಂಗಿದ್ದರು ಮತ್ತು ತಮ್ಮನ್ನು ದೈನಂದಿನ ಕೂಲಿ ಕಾರ್ಮಿಕರು, ತಮಿಳುನಾಡಿನ ಕಾರ್ಮಿಕರು ಮತ್ತು ಮೀನುಗಾರರೆಂದು ಹೇಳಿಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಅವರು ಮಾರ್ಚ್ ೧೭ ರಂದು ಶ್ರೀಲಂಕಾದ ಏಜೆಂಟರಿಗೆ ೬ ರಿಂದ ೧೦ ಲಕ್ಷ ಶ್ರೀಲಂಕಾ ನಗದನ್ನು ಪಾವತಿಸಿ ಶ್ರೀಲಂಕಾದಿAದ ಹೊರಟರು. ಅವರಿಗೆ ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಅವರು ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದರು. ತೂತುಕುಡಿಯನ್ನು ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು. ಆದರೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಹೇಳಲಾಗಿತ್ತು. ತಮಿಳುನಾಡಿನಿಂದ ಅವರು ಖಾಸಗಿ ಬಸ್ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿದರು, ಅಲ್ಲಿ ಬೆಂಗಳೂರಿನಲ್ಲಿ ಏಜೆಂಟರೂ ಇದ್ದರು. ಬೆಂಗಳೂರಿನಿAದ ಅವರು ಮಂಗಳೂರು ತಲುಪಿದರು. ಶ್ರೀಲಂಕಾದ ೩೯ ಮಂದಿ ಇದ್ದವರಲ್ಲಿ ೩೮ ಜನರನ್ನು ಬಂಧಿಸಲಾಗಿದೆ. ಸುಮಾರು ೬೫-೭೦ ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಕೆಲವು ವಾರಗಳ ಹಿಂದೆ ಮರಳಿದ್ದಾನೆ ಎಂದು ಮಾಹಿತಿ ನೀಡಿದರು.