ವೀರಾಜಪೇಟೆ ಜೂ:೧೧ ಕಳೆದ ೧೮ ತಿಂಗಳ ಹಿಂದೆ ತನ್ನ ಪತ್ನಿ, ಮಗಳನ್ನು ಕೊಲೆ ಮಾಡಿ ಕುಡಿಯುವ ನೀರಿನ ಬಾವಿಗೆ ಎಸೆದಿದ್ದ ಅಸ್ಸಾಂ ರಾಜ್ಯದ ವಲಸೆ ಕಾರ್ಮಿಕ ಆಲಿ ಎಂಬಾತನಿಗೆ ವೀರಾಜಪೇಟೆಯ ಎರಡನೇ ಅಧಿಕ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಆರ್.ದಿಂಡಲ್‌ಕೊಪ್ಪ ಅವರು ಷರತ್ತು ಬದ್ಧ ಜಾಮೀನು ನೀಡಿದ್ದಾರೆ.

ಕಳೆದ ತಾ. ೨೦-೧-೨೦ ರಂದು ವೀರಾಜಪೇಟೆ ಬಳಿಯ ಕೆ.ಬೈಗೋಡು ಗ್ರಾಮದ ಎಂ.ದೇವಯ್ಯ ಎಂಬವರ ಕಾಫೀತೋಟದ ಲೈನ್ ಮನೆಯಲ್ಲಿದ್ದ ಆಲಿ ಹಾಗೂ ಕುಟುಂಬದ ನಡುವೆ ಕೂಲಿ ವೇತನದ ಗಲಾಟೆ ಉಂಟಾಗಿ ಗಲಾಟೆ ವಿಕೋಪಕ್ಕೆ ತೆರಳಿದಾಗ ಆಲಿ ಮನೆಯಲ್ಲಿದ್ದ ತನ್ನ ಪತ್ನಿ ಮುರ್ಷಿದಾ ಕಾತೂನ್ (೪೧) ಹಾಗೂ ಮಗಳು ಅನುರಾ ಕಾತೂನ್ (೧೬) ಇಬ್ಬರನ್ನು ಹೊಡೆದು ಕೊಲೆ ಮಾಡಿ ತೋಟದ ಬಳಿಯ ಕುಡಿಯುವ ನೀರಿನ ಬಾವಿಗೆ ಎಸೆದಿದ್ದ. ಇಲ್ಲಿನ ಗ್ರಾಮಾಂತರ ಪೊಲೀಸರು ಆಲಿಯ ಮೇಲೆ ಸಂಶಯಗೊAಡು ಆತನ ವಿರುದ್ಧ ಜೋಡಿ ಕೊಲೆ ಮೊಕದ್ದಮೆ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಬಾವಿಯಲ್ಲಿ ತಾಯಿ, ಮಗಳ ಮೃತದೇಹ ಪತ್ತೆಯಾದ ನಂತರ ದೇವಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆಯ ತರುವಾಯ ಆಲಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಿದಾಗ ಆಲಿ, ಪತ್ನಿ, ಮಗಳ ನಡುವೆ ಹಣದ ವಿಚಾರದಲ್ಲಿ ಘರ್ಷಣೆ ಉಂಟಾಗಿರುವುದು ಗೊತ್ತಾಗಿದೆ.

ಈ ಜೋಡಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದಿಂಡಲ್‌ಕೊಪ್ಪ ಅವರು ಎರಡು ಲಕ್ಷ ಮೌಲ್ಯದ ಬಾಂಡ್ ಹಾಗೂ ಪ್ರಕರಣ ದಾಖಲಾಗಿರುವ ಪೊಲೀಸ್ ಠಾಣೆ ಬಿಟ್ಟು ಹೋಗದಂತೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಕೊಲೆ ಆರೋಪಿ ಪರ ವಕೀಲ ಕೆ.ಸಿ.ಪ್ರದ್ಯುಮ್ನ ವಾದಿಸಿದರು.