ಸೋಮವಾರಪೇಟೆ,ಜೂ.೧೧: ಸಮೀಪದ ಐಗೂರು ಗ್ರಾಮದಲ್ಲಿರುವ ಬಹುತೇಕ ಕೋಳಿ ಅಂಗಡಿಗಳ ತ್ಯಾಜ್ಯ ಚೋರನ ಹೊಳೆ ಸೇರುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಐಗೂರಿನಿಂದ ಕಾಜೂರು ಸಂಪರ್ಕ ರಸ್ತೆಯಲ್ಲಿರುವ ಚೋರನಹೊಳೆಯ ಸೇತುವೆ ಕೆಳ ಭಾಗದಲ್ಲಿ ಕೋಳಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದರಿಂದ ಹೊಳೆಯ ನೀರು ಕಲುಷಿತಗೊಳ್ಳುತ್ತಿದೆ. ಇಡೀ ವಾತಾವರಣ ದುರ್ಗಂಧಮಯ ವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಚೀಲದಲ್ಲಿ ಕೋಳಿ ತ್ಯಾಜ್ಯ ತುಂಬಿಸಿ ಹೊಳೆಗೆ ಹಾಕುತ್ತಿದ್ದ ಐಗೂರು ಕೋಳಿ ಅಂಗಡಿಯ ಮಾಲೀಕನನ್ನು ಸ್ಥಳೀಯರು ಪ್ರಶ್ನಿಸಿದ ಸಂದರ್ಭ ‘ಐಗೂರಿನ ಎಲ್ಲಾ ಕೋಳಿ ಅಂಗಡಿಯವರೂ ಇಲ್ಲೇ ತ್ಯಾಜ್ಯ ಹಾಕುತ್ತಿದ್ದಾರೆ; ನಮ್ಮನ್ನು ಮಾತ್ರ ಯಾಕೆ ಪ್ರಶ್ನಿಸುತ್ತೀರಾ?’ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಈಗಾಗಲೇ ಸೇತುವೆ ಬಳಿಯಲ್ಲಿ ಕೋಳಿ ತ್ಯಾಜ್ಯ ಸಂಗ್ರಹಗೊAಡಿದ್ದು, ಕೊಳೆತು ಹೊಳೆ ನೀರಿಗೆ ಸೇರುತ್ತಿದೆ. ಈ ನೀರನ್ನು ಕೃಷಿಗೆ ಬಳಸುತ್ತಿದ್ದು, ಜಾನುವಾರುಗಳೂ ಸೇವಿಸುತ್ತಿವೆ. ಹೊಳೆಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಜರುಗಿಸಬೇಕು. ಕೋಳಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಚಿಸಬೇಕೆಂದು ಸ್ಥಳೀಯರಾದ ಅಶೋಕ್, ಗಣೇಶ್, ಉದಯ್ ಅವರುಗಳು ಒತ್ತಾಯಿಸಿದ್ದಾರೆ.