ಸೋಮವಾರಪೇಟೆ, ಜೂ.೯ : ಶಿಥಿಲಾವಸ್ಥೆಗೆ ತಲುಪಿದ್ದ ಸೋಮವಾರಪೇಟೆ ತಾಲೂಕು ಕಚೇರಿಗೆ ಮರು ಜೀವ ನೀಡುವ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ೧ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು ಗುತ್ತಿಗೆದಾರ ವ್ಯಕ್ತಪಡಿಸಿದ್ದಾರೆ.ಮಳೆಹಾನಿ ಪರಿಹಾರ ನಿಧಿಯಡಿ ೧.೩೫ ಕೋಟಿ ಅನುದಾನವನ್ನು ತಾಲೂಕು ಕಚೇರಿಯ ನವೀಕರಣ ಕಾರ್ಯಕ್ಕೆ ಬಿಡುಗಡೆ ಮಾಡಿದ್ದು, ಅದರಂತೆ ಕಳೆದ ೩ ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಗೊAಡಿದೆ. ಇದೀಗ ಶೇ.೬೦ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.ಕಳೆದ ಕೆಲ ದಶಕಗಳಿಂದೀಚೆಗೆ ತಾಲೂಕು ಕಚೇರಿ ಕಟ್ಟಡ ಶಿಥಿಲಾಸ್ಥೆಗೆ ತಲುಪುತ್ತಿದ್ದು, ಮಳೆಗಾಲ ಕಳೆಯುವದು ಸಿಬ್ಬಂದಿಗಳಿಗೆ ಹಗ್ಗದ ಮೇಲಿನ ನಡಿಗೆಯಂತಾಗಿತ್ತು. ತಾಲೂಕಿನ ಮಿನಿವಿಧಾನಸೌಧ ಮಳೆಗಾಲದಲ್ಲಿ ಸೋರಲು ಪ್ರಾರಂಭಿಸಿ ದಶಕಗಳೇ ಕಳೆದಿದ್ದವು. ಕಂದಾಯ ಇಲಾಖೆಯ ಸಾವಿರಾರು ಕಡತಗಳನ್ನು ರಕ್ಷಣೆ ಮಾಡಿಕೊಳ್ಳುವದಕ್ಕೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದರು.

೧೯೯೭ರಲ್ಲಿ ನಿರ್ಮಾಣವಾದ ತಾಲೂಕು ತಹಶೀಲ್ದಾರರ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದು ನಾಮಕರಣ ಮಾಡಿದ್ದು, ಆರಂಭದ ಕೆಲ ವರ್ಷಗಳ ಕಾಲ ಕಟ್ಟಡ ಸುಸ್ಥಿತಿ ಯಲ್ಲಿತ್ತು. ಸ್ಥಳೀಯ ಹವಾಮಾನವನ್ನು ಪರಿಗಣಿಸದೇ, ಮಳೆಗಾಲದ ನೀರು, ಗಾಳಿಯ ಅಂದಾಜು ಮಾಡದೇ ಅವೈಜ್ಞಾನಿಕ ವಾಗಿ ಕಿಟಕಿಗಳನ್ನು ನಿರ್ಮಿಸಿದ್ದರಿಂದ ಮಳೆಗಾಲದಲ್ಲಿ ಎರಚಲು ನೀರು ನೇರವಾಗಿ ಕಚೇರಿ ಯೊಳಗೆ ಬರುತ್ತಿತ್ತು.

೨೩ ವರ್ಷಗಳ ಹಿಂದೆ ಈ ಕಟ್ಟಡಕ್ಕೆ ಸುಮಾರು ೧ ಕೋಟಿ ರೂ.ಗಳನ್ನು ವಿನಿಯೋಗಿಸಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‌ಟಿಸಿ ವಿತರಣಾ ಕೇಂದ್ರ, ನೆಮ್ಮದಿ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ,

(ಮೊದಲ ಪುಟದಿಂದ) ಭೂಮಿ ಇಲಾಖೆ, ಅಭಿಲೇಖಾಲಯ ಸೇರಿದಂತೆ ಕಂದಾಯ ಇಲಾಖೆಗೆ ಸಂಬAಧಪಟ್ಟ ಎಲ್ಲಾ ವಿಭಾಗಗಳ ಕಚೇರಿಯನ್ನು ತೆರೆದು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲಾಗುತ್ತಿತ್ತು.

ಕಳೆದ ಒಂದೂವರೆ ದಶಕದಿಂದ ಈ ಕಟ್ಟಡದ ಬಗ್ಗೆ ಸರ್ಕಾರವೇ ಅನಾದರ ತೋರಿದ್ದರಿಂದ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆಗೆ ತಲುಪಿತ್ತು. ಪರಿಣಾಮ ರೆಕಾರ್ಡ್ ರೂಂನಲ್ಲಿ ೧.೩೭ಲಕ್ಷಕ್ಕೂ ಅಧಿಕ ಕಡತಗಳಿದ್ದು, ಅವುಗಳ ರಕ್ಷಣೆಗೆ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಕಚೇರಿಯ ಒಳಗೆ ಟಾರ್ಪಲ್ ಕಟ್ಟಿಕೊಂಡು ಕೆಲಸ ಮಾಡುವ ಸ್ಥಿತಿ ಸಾಮಾನ್ಯವಾಗಿತ್ತು.

ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ಕಟ್ಟಡ ದುರಸ್ತಿಗೆ ೧.೩೫ ಕೋಟಿ ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೇ. ೯೦ರಷ್ಟು ಪ್ಲಾಸ್ಟರಿಂಗ್ ಕಾರ್ಯ ಮುಕ್ತಾಯಗೊಂಡಿದೆ. ಇದರೊಂದಿಗೆ ಕಚೇರಿಯ ಮೇಲ್ಭಾಗ ನೂತನವಾಗಿ ಒಂದು ಅಂತಸ್ತು ನಿರ್ಮಿಸಿ, ಶೀಟ್‌ಗಳನ್ನು ಅಳವಡಿಸಲಾಗಿದೆ.

ಮಳೆಗಾಲದಲ್ಲಿ ನೀರು ಸೋರಿಕೆಯಾಗದಂತೆ ಕ್ರಮ ವಹಿಸಲಾಗಿದ್ದು, ಕಿಟಕಿಗಳ ನವೀಕರಣ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಕಚೇರಿಯ ಮೇಲ್ಭಾಗ ಮಹಿಳೆ/ ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ, ಸಭಾಂಗಣ, ಕಚೇರಿ ಕೊಠಡಿಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ತಿಂಗಳಿನಲ್ಲಿ ಕಾಮಗಾರಿ ಬಹುತೇಕ ಮುಕ್ತಾಯಗೊಳ್ಳಲಿದೆ.

ಈಗಾಗಲೇ ತಾಲೂಕು ಕಚೇರಿಯ ಅವ್ಯವಸ್ಥೆಯಿಂದಾಗಿ ಉಪ ನೋಂದಣಾಧಿಕಾರಿಗಳ ಕಚೇರಿ ಎತ್ತಂಗಡಿಯಾಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊAಡಿದೆ. ಕಂದಾಯ ಇಲಾಖೆ, ಸರ್ವೆ ಇಲಾಖೆಯ ಕಚೇರಿಗಳು ತಾಲೂಕು ಕಚೇರಿ ಮುಂಭಾಗವಿರುವ ಬ್ರಿಟೀಷರ ಕಾಲದ ಕಟ್ಟಡಲ್ಲಿಯೇ ಕಾರ್ಯಾಚರಿಸುತ್ತಿವೆ. ನೂತನ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಂಡರೆ ಈ ಎಲ್ಲಾ ಕಚೇರಿಗಳೂ ಒಂದೇ ಸಂಕೀರ್ಣಕ್ಕೆ ಬರುವ ನಿರೀಕ್ಷೆಯಿದೆ.

- ವಿಜಯ್ ಹಾನಗಲ್