ತಜ್ಞರ ಸಲಹೆ ಆಧರಿಸಿ ಅನ್ಲಾಕ್ ಸ್ವರೂಪ ನಿರ್ಧಾರ
ಬೆಂಗಳೂರು, ಜೂ. ೯: ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಅನ್ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆಲ ಚಟುವಟಿಕೆಗೆ ನಿರ್ಬಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಅನ್ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ. ಪಾಸಿಟಿವಿಟಿ ದರ ಶೇ. ೫ ಕ್ಕಿಂತ ಕಡಿಮೆ, ೫ ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದರು. ಅನ್ಲಾಕ್ ಬಗ್ಗೆ ಯಾವುದೇ ಗೊಂದಲ ಇಲ್ಲ. ಮಹಾರಾಷ್ಟçದಲ್ಲಿ ಪ್ರಕರಣ ಇಳಿಕೆಯಾದ ಬಳಿಕ ಅನ್ಲಾಕ್ ಕಡೆಗೆ ಹೋಗಿದ್ದಾರೆ. ಆ ರಾಜ್ಯಕ್ಕಿಂತ ಬಹಳ ಬೇಗ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಕೆಲ ದೇಶಗಳಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿಲ್ಲ. ಅನೇಕ ಮಕ್ಕಳಿಗೆ ಮನೆ ಆರೈಕೆ ಮಾಡಲಾಗಿದೆ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಮಕ್ಕಳ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು. ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ ೨,೨೮೧ ಪ್ರಕರಣಗಳಿದ್ದು, ೧,೯೪೮ ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, ೧೦೨ ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಭತ್ತದ ಪ್ರತಿ ಕ್ವಿಂಟಲ್ ಕನಿಷ್ಟ ಬೆಂಬಲ ಏರಿಕೆ
ನವದೆಹಲಿ, ಜೂ. ೯: ೨೦೨೧-೨೨ರ ಬೆಳೆ ವರ್ಷಕ್ಕೆ ಭತ್ತದ ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ)ಯನ್ನು ಪ್ರತಿ ಕ್ವಿಂಟಲ್ಗೆ ೭೨ ರೂಪಾಯಿ ಏರಿಕೆ ಮಾಡಿದ್ದು ಒಟ್ಟಾರೆ ಕ್ವಿಂಟಲ್ ಬೆಲೆ ೧,೯೪೦ ರೂ.ಗೆ ಏರಿಕೆಯಾಗಿದೆ. ರೈತರಿಗೆ ಸಹಾಯವಾಗಲೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಈ ನಿರ್ಧಾರ ಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಬೆಳೆಗಳ ಮೇಲಿನ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ ಎಂದು ತಿಳಿಸಿದರು. ೨೦೨೧-೨೨ ಬೆಳೆ ವರ್ಷಕ್ಕೆ (ಜುಲೈ-ಜೂನ್) ಭತ್ತದ ಎಂಎಸ್ಪಿಯನ್ನು ಕ್ವಿಂಟಲ್ಗೆ ೧,೯೪೦ ರೂ.ಗೆ ಹೆಚ್ಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಿಂದಿನ ವರ್ಷದ ಅವಧಿಯಲ್ಲಿ ಪ್ರತಿ ಕ್ವಿಂಟಲ್ಗೆ ರೂ. ೧,೮೬೮ ಇತ್ತು. ಭತ್ತವು ಬೇಸಿಗೆಯ ಪ್ರಮುಖ ಬೆಳೆಯಾಗಿದ್ದು, ಇದರ ಬಿತ್ತನೆ ನೈರುತ್ಯ ಮುಂಗಾರು ಆರಂಭದಿAದ ಪ್ರಾರಂಭವಾಗುತ್ತದೆ. ಜೂನ್ ನಿಂದ ಸೆಪ್ಟೆಂಬರ್ ನಡುವೆ ಸಾಮಾನ್ಯ ಮುಂಗಾರು ಅನ್ನು ಹವಾಮಾನ ಇಲಾಖೆ ನಿರೀಕ್ಷಿಸಿದೆ. ಅಂತೆಯೇ, ಜೋಳದ ಎಂಎಸ್ಪಿಯನ್ನು ಕಳೆದ ವರ್ಷ ಕ್ವಿಂಟಲ್ಗೆ ೨,೧೫೦ ರೂ.ಗಳಿಂದ ಪ್ರಸಕ್ತ ವರ್ಷದಲ್ಲಿ ಕ್ವಿಂಟಲ್ಗೆ ೨,೨೫೦ ರೂ.ಗೆ ಹೆಚ್ಚಿಸಲಾಗಿದೆ ಎಂದು ತೋಮರ್ ಹೇಳಿದರು.
ಹಣಕಾಸಿನ ಬಿಕ್ಕಟ್ಟು: ಕಲಾವಿದ ದಂಪತಿ ಆತ್ಮಹತ್ಯೆ
ಮಂಗಳೂರು, ಜೂ. ೯: ಖ್ಯಾತ ತಬಲಾ ಕಲಾವಿದ ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಗರದ ಪಿಂಟೋಸ್ ಲೇನ್ನಲ್ಲಿ ನಡೆದಿದೆ. ತಬಲಾ ಕಲಾವಿದ ಸುರೇಶ್ (೫೨) ಹಾಗೂ ಅವರ ಪತ್ನಿ ವಾಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಣಿ ಅವರು ಖಾಸಗಿ ಕಾಲೇಜಿನಲ್ಲಿ ಕರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಣಕಾಸಿನ ಬಿಕ್ಕಟ್ಟು ಇಂತಹಾ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಡೆತ್ನೋಟ್ ಕಂಡುಬAದಿದೆ, ಇದರಲ್ಲಿ ಚಿಟ್ಫಂಡ್ನಲ್ಲಿನ ಹೂಡಿಕೆಯಿಂದ ಉಂಟಾದ ನಷ್ಟವನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾವಿಯಲ್ಲಿ ಪತಿ ಸುರೇಶ್ ಅವರ ಶವ ಪತ್ತೆಯಾಗಿದ್ದು, ಮನೆಯೊಳಗೆ ಪತ್ನಿ ವಾಣಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.