ಮಡಿಕೇರಿ, ಜೂ. ೯: ಆದಿವಾಸಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆದಿವಾಸಿ ಹಾಡಿಗಳ ಮನೆ ಮುಂದೆ ಖಾಲಿ ತಟ್ಟೆ ಹಿಡಿದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ. ಗಣೇಶ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ನಾನಾ ಭಾಗಗಳಲ್ಲಿ ನೆಲೆಸಿರುವ ಐವತ್ತು ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಸಂಕಷ್ಟದಲ್ಲಿದ್ದು, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಬಹುತೇಕ ಕುಟುಂಬಗಳು ಕೋವಿಡ್ ಲಾಕ್ಡೌನ್ನಿಂದ ಕೆಲಸವೂ ಸಿಗದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವಿಸುತ್ತಿರುವ ಆದಿವಾಸಿ ಬುಡಕಟ್ಟು ಸಮುದಾಯ ದವರ ಬೇಡಿಕೆ ಈಡೇರಿಸಲು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆಯಾದರೂ ಇಂದಿಗೂ ಶಾಶ್ವತ ಯೋಜನೆಗಳಾಗಲಿ ಮೂಲಸೌಕರ್ಯಗಳು ದೊರೆತಿಲ್ಲ.
ಇದೀಗ ಲಾಕ್ಡೌನ್ ಸಮಸ್ಯೆ ಯಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳು ಗೆಡ್ಡೆಗೆಣಸು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಆದಿವಾಸಿಗಳ ಬೇಡಿಕೆ ಈಡೇರಿಸ ಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ,
ಆದಿವಾಸಿಗಳಿಗೆ, ಅಲೆಮಾರಿ ಸಮುದಾಯಗಳಿಗೆ ಉಚಿತ ಪೌಷ್ಟಿಕ ಆಹಾರ ಮತ್ತು ಜೀವನಾವಶ್ಯಕ ಎಲ್ಲಾ ವಸ್ತುಗಳಿರುವ ರೇಷನ್, ಅಗತ್ಯ ದಿನಸಿ ಕಿಟ್ಗಳನ್ನು ಅವರು ನೆಲೆಸಿರುವ ಹಾಡಿ, ಪ್ರದೇಶಗಳಿಗೆ ಕೂಡಲೇ ನೀಡಬೇಕು, ಉಚಿತವಾದ ಕೋವಿಡ್ ಲಸಿಕೆಯನ್ನು ನೀಡಬೇಕು, ಆದಿವಾಸಿಗಳು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ (ಕನಿಷ್ಟ ೫ ಕಿ.ಮೀ.ಒಳಗೆ) ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಕೂಡಲೇ ಸ್ಥಾಪಿಸಿ ಅಗತ್ಯವಿರುವ ವೈದ್ಯರು, ನರ್ಸ್ಗಳು ಮುಂತಾದ ಸಿಬ್ಬಂದಿಯನ್ನು ನೇಮಿಸಿ ಕಾರ್ಯಾರಂಭಿಸಬೇಕು,
ಪ್ರತಿ ಆದಿವಾಸಿ ಕುಟುಂಬಕ್ಕೆ ಪ್ರತಿ ತಿಂಗಳೂ ರೂ.೧೦,೦೦೦ ಗಳನ್ನು ಸಹಾಯ ಧನ ನೀಡಬೇಕು, ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವ ವಿದ್ಯಾರ್ಥಿ ವೇತನ ಕೂಡಲೇ ನೀಡುವುದು. ಆದಿವಾಸಿ ಮಕ್ಕಳ ಶಿಕ್ಷಣದ ಪ್ರಕ್ರಿಯೆ ದುರ್ಬಲವಾಗದಂತೆ ಕ್ರಮ ವಹಿಸಬೇಕು, ಅರಣ್ಯದಲ್ಲಿನ ಕಿರು ಉತ್ಪನ್ನಗಳ ಸಂಗ್ರಹದ ಮೂಲಭೂತ ಅರಣ್ಯ-ಸಮುದಾಯದ ಹಕ್ಕಿಗೆ ಮುಕ್ತ ಅವಕಾಶವನ್ನು ಕಲ್ಪಿಸಬೇಕು, ಆದಿವಾಸಿಗಳ ಸಂರಕ್ಷಣೆಗೆ ಸರಕಾರ ವಿಶೇಷವಾದ ಅನುದಾನ ಹಣವನ್ನು ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಪ್ರತಿಭಟನಕಾರರು ಸರಕಾರದ ಮುಂದಿಟ್ಟಿದ್ದಾರೆ.
ಸಾಂಕೇತಿಕ ಪ್ರತಿಭಟನೆಯು ಮಜ್ಜಿಗೆ ಹಳ್ಳ, ಚಂದನಕೆರೆ ಹಾಡಿ, ತಾಯಿಭೂಮಿ ಪೈಸಾರಿ, ಇರ್ಪು ಹಾಡಿ, ಕೆ ಚೆಟ್ಟಳ್ಳಿ ಸೇರಿದಂತೆ ೫ ತಾಲೂಕುಗಳ ವಿವಿಧ ಹಾಡಿಗಳಲ್ಲಿ ಮಾಡಲಾಗಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಶೋಕ್ ತಿಳಿಸಿದ್ದಾರೆ.