ಕೂಡಿಗೆ, ಜೂ. ೯: ಕೋವಿಡ್ ಟಾಸ್ಕ್ಫೋರ್ಸ್ ಸಮಿತಿಯ ಅಧಿಕಾರಿಗಳ ತಂಡ ಕುಶಾಲನಗರ ತಾಲೂಕು ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ಕೊರೊನಾ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಗಳ ಆದೇಶದಂತೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ತೆರೆಯಲಾದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಸಮಗ್ರವಾದ ಮಾಹಿತಿ ಮತ್ತು ಒಂದು ಗ್ರಾಮದಲ್ಲಿ ಹತ್ತಕ್ಕಿಂತಲೂ ಹೆಚ್ಚು ಸೋಂಕಿತ ವ್ಯಕ್ತಿಗಳು ಇರುವ ಸ್ಥಳವನ್ನು ಸೀಲ್‌ಡೌನ್ ಮಾಡುವುದು, ಆಯಾ ಗ್ರಾಮದಲ್ಲಿ ದ್ರವ ಪರೀಕ್ಷೆ ನಡೆಸುವುದು, ಸೋಂಕಿನ ಗುಣಲಕ್ಷಣಗಳು ಕಂಡುಬAದರೆ ಅವರುಗಳನ್ನು ಕೋವಿಡ್ ಸೆಂಟರ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಮಾಹಿತಿ ನೀಡಿದರು.

ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳಾದ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ತಂಡ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡುಮಂಗಳೂರು, ಕೂಡಿಗೆ, ನೆಲ್ಲಿಹುದಿಕೇರಿ ಆರು ಗ್ರಾಮ ಪಂಚಾಯಿತಿಗಳಿಗೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಳ್ಳಲಾಗಿರುವ ಎ.ಪಿ.ಸಿ.ಎಂ.ಎಸ್. ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಇದುವರೆಗೂ ಲಸಿಕೆ ನೀಡಿರುವ ಮಾಹಿತಿ ಮತ್ತು ದ್ರವ ಪರೀಕ್ಷೆಯ ವರದಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್, ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗೌತಮ್, ಗುರುದರ್ಶನ್, ಪೀರ್ ಅಹಮದ್, ಸಚಿನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀಣಾ, ಅಯಿಷಾ, ರಾಕೇಶ್, ಸಂತೋಷ್ ಸೇರಿದಂತೆ ಅಯಾ ವ್ಯಾಪ್ತಿಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಜರಿದ್ದರು.