
ಕರಿಕೆ, ಜೂ. ೯ : ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಬೇಟೆಯಾಡಿದ ನುರಿತ ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾಗಮಂಡಲ ವಲಯ ಅರಣ್ಯಾಧಿಕಾರಿ ಹೆಚ್.ಜಿ. ದೇವರಾಜು ಮಾರ್ಗದರ್ಶನದಲ್ಲಿ ಖಚಿತ ಸುಳಿವಿನ ಮೇರೆಗೆ ದಾಳಿ ಮಾಡಿದ ಸಿಬ್ಬಂದಿಗಳು ಕೆ.ಬಿ. ಉಮೇಶ್, ಪಿ.ಬಿ ರಾಮಕೃಷ್ಣ, ಕೆ.ಬಿ. ರವೀಂದ್ರ, ಕೆ.ಬಿ. ಸುರೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ಅಳಿವಿನಂಚಿನಲ್ಲಿರುವ ಕೆಂದಳಿಲು ಮತ್ತು ಕಬ್ಬೆಕ್ಕು ಪ್ರಾಣಿಗಳ ಮಾಂಸ ಹಾಗೂ ಸುಬ್ರಮಣ್ಯ ಎಂಬವರ ಪರವಾನಿಗೆ ರಹಿತ ಬಂದೂಕನ್ನು ವಶಪಡಿಸಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಸೆಕ್ಷನ್ ೨(೧), (೧೬) (೨೦), (೩೫), (೩೬), ೯, ೩೧, ೩೯, ೫೦, ೫೧,೫೯ ಪ್ರಕಾರ
(ಮೊದಲ ಪುಟದಿಂದ) ಮೊಕದ್ದಮೆ ದಾಖಲಿಸಿ ನಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಧಿತನಾಗಿರುವ ರಾಮಕೃಷ್ಣ ಈ ಹಿಂದೆ ಸಿಂಗಳಿಕ ಬೇಟೆಯಾಡಿದ ಪ್ರಕರಣದಡಿಯಲ್ಲಿ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದು ಹೊರಬಂದಿರುತ್ತಾನೆ. ಕೆಲದಿನಗಳ ಹಿಂದೆ ‘ಶಕ್ತಿ'ಯಲ್ಲಿ ‘ದೇಶದಲ್ಲಿ ಲಾಕ್ಡೌನ್ ಕೋವಿಡ್ ಭೀತಿಯಲ್ಲಿ ಅರಣ್ಯ ಸಿಬ್ಬಂದಿ : ಬೇಟೆಗಾರರಿಗೆ ಹಬ್ಬ’ ಎಂಬ ಶೀರ್ಷಿಕೆಯಡಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅರಣ್ಯ ಸಂರಕ್ಷಣೆ, ಕಳ್ಳ ಬೇಟೆಯನ್ನು ತಡೆಗಟ್ಟಲು ಇಲಾಖೆಗೆ ಸಹಕಾರಿಯಾಗಬೇಕಾದ ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿಯೊಬ್ಬರು ಕಳ್ಳ ಬೇಟೆಗಾರರನ್ನು ರಕ್ಷಿಸಲು ಬೆಳಗ್ಗಿನಿಂದ ಅರಣ್ಯ ಕಚೇರಿಯಲ್ಲಿ ಪ್ರಯತ್ನಿಸುತ್ತಿದ್ದುದು ನಿಜಕ್ಕೂ ಸಾರ್ವಜನಿಕರು ತಲೆತಗ್ಗಿಸುವಂತೆ ಮಾಡಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಗಳಾದ ಸಚಿನ್ ಬಿರಾದಾರ, ಮಂಜುನಾಥ, ಮಂಜುನಾಥ ವಡೆಯರ್, ಅರಣ್ಯ ರಕ್ಷಕರಾದ ಪರಮೇಶ್, ಅಶೋಕ, ಅರಣ್ಯ ವೀಕ್ಷಕರಾದ ಪ್ರವೀಣ, ಚಂದ್ರಶೇಖರ ಪಾಲ್ಗೊಂಡಿದ್ದರು. ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಸುಧೀರ್ ಹೊದ್ದೆಟ್ಟಿ