ಚೆಟ್ಟಳ್ಳಿ, ಜೂ. ೯: ಕಾಫಿ ತೋಟವೊಂದರಲ್ಲಿ ಬಲೆಗೆ ಸಿಲುಕಿ ಕಾಲು ಮುರಿದುಕೊಂಡು ಜೀವನ್ಮರಣ ಸ್ಥಿತಿಯಲ್ಲಿ ನೋವಿನಿಂದ ನರಳುತಿದ್ದ ಅನಾಥ ಗೋವನ್ನು ರಕ್ಷಿಸಿ ಅಮ್ಮತ್ತಿಯ ಗೋಶಾಲೆಗೆ ಒಪ್ಪಿಸಿದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ಚೆಟ್ಟಳ್ಳಿಯ ಪಳಗಂಡ ಕಾಳಪ್ಪ ಎಂಬವರು ತೋಟಕ್ಕೆ ತೆರಳಿದಾಗ, ಪಕ್ಕದ ತೋಟದಲ್ಲಿ ಕಾಡು ಪ್ರಾಣಿಗೆ ಹಾಕಿದ ಬಲೆಗೆ ಸಿಲುಕಿ ಸುಮಾರು ಒಂದುವರೆ ವರ್ಷ ವಯಸ್ಸಿನ ಗೋವು ನರಳಾಡುತ್ತಿದ್ದುದನ್ನು ಗಮನಿಸಿದರು. ಬಲೆಗೆ ಸಿಲುಕಿದ ಪರಿಣಾಮ ಗಾಯವಾಗಿದ್ದು, ಕೊಳೆತು ಹೋಗಿತ್ತು. ಕಾಲು ಮುರಿದಿದ್ದ ಕಾರಣ ನೋವಿನಿಂದ ಒದ್ದಾಡುತಿತ್ತು. ಸ್ಥಳೀಯರಾದ ಹರಿ, ಕುಟ್ಟಪ್ಪ, ಗೋಪಾಲ, ಮಹೇಶ್ ಹರೀಶ್ ಅವರ ಸಹಾಯದಿಂದ ಕಾಳಪ್ಪ ಗೋಣಿಚೀಲ ಹೊದಿಸಿ ಮಳೆ ಬೀಳದಂತೆ ಮರೆಮಾಡಿ ಗಂಜಿ, ಹುಲ್ಲನ್ನು ತಿನ್ನಿಸಿ ಗೋವಿನ ಜೀವವನ್ನು ರಕ್ಷಿಸಿದರು. ಚೆಟ್ಟಳ್ಳಿ ಪಶುವೈದ್ಯ ಸಂಜೀವ, ಆರ್. ಸಿಂಧ್ಯೆಗೆ ತಿಳಿಸಿದ್ದು, ಪಶು ಆರೋಗ್ಯ ಕೇಂದ್ರದ ಸಿಬ್ಬಂದಿ ಮೋಸಸ್ ಚುಚ್ಚುಮದ್ದು ಹಾಗೂ ಪ್ರಥಮ ಚಿಕಿತ್ಸೆ ನೀಡಿದರು.
ಅಮ್ಮತ್ತಿಯ ಗೋಶಾಲೆಯ ರಾಮಚಂದ್ರ ಭಟ್ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಲಾಯಿತು. ಅಮ್ಮತಿಯ ಕಾಮಧೇನು ಗೋಶಾಲೆಯ ರಾಮಚಂದ್ರಭಟ್, ರಾಘವೇಂದ್ರ ಭಟ್ ಹಾಗೂ ಗುರುರಾಜ್ ಭಟ್ ಅವರೊಂದಿಗೆ ಸಿದ್ದಾಪುರದ ಕೇಸರಿ ಯೂತ್ ಮೂವ್ಮೆಂಟ್ ಕಾರ್ಯಕರ್ತರಾದ ಅಮ್ಮತ್ತಿಯ ಗುರುವಪ್ಪ, ವಿನಾಯಕ, ನಿತಿನ್, ಅಪ್ಪು, ಶಿಜು, ವಿಜೇಶ್, ಜಿಜಿತ್ ಹಾಗೂ ಇತರರು ಕೈ ಜೋಡಿಸಿ ಕಾಲು ಮುರಿದುಕೊಂಡು ನಡೆಯಲಸಾಧ್ಯವಾದ ಸ್ಥಿತಿಯಲ್ಲಿದ್ದ, ಅನಾಥ ಗೋವನ್ನು ಗೋಣಿಚೀಲಕ್ಕೆ ಬಡಿಗೆ ಸಿಕ್ಕಿಸಿ ಸುಮಾರು ಅರ್ಧ ಕಿಲೋಮೀಟರ್ ಹೆಗಲಮೇಲೆ ಹೊತ್ತು ನಡೆದು ಗೂಡ್ಸ್ ಆಟೋದಲ್ಲಿ ಅಮ್ಮತ್ತಿಯ ಕಾಮಧೇನು ಗೋಶಾಲೆಗೆ ಸಾಗಿಸಿದರು. ಅಮ್ಮತ್ತಿಯ ಕಾಮಧೇನು ಗೋಶಾಲೆಯಲ್ಲಿ ರಕ್ಷಿಸಿದ ಹಾಗೂ ದಾನ ಪಡೆದ ೩೩ ಗೋವುಗಳಿದ್ದು, ಸಾಕುತ್ತಿದ್ದೇವೆ. ನಿನ್ನೆದಿನ ಚೆಟ್ಟಳ್ಳಿಯ ಪಳಗಂಡ ಕಾಳಪ್ಪ, ಜೀವನ್ಮರಣ ಸ್ಥಿತಿಯಲ್ಲಿದ್ದ ಗೋವನ್ನು ರಕ್ಷಿಸಿ ನಮಗೆ ಒಪ್ಪಿಸಿದ್ದಾರೆ. ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆ, ಆಹಾರವನ್ನು ನೀಡುತ್ತಿದ್ದು ಸ್ಪಂದಿಸುತ್ತಿದೆ ಎಂದು ರಾಮಚಂದ್ರ ಭಟ್ ಮಾಹಿತಿ ನೀಡಿದ್ದಾರೆ.
-ಪುತ್ತರಿರ ಕರುಣ್ ಕಾಳಯ್ಯ