ಕುಶಾಲನಗರ, ಜೂ. ೮: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಕುಶಾಲನಗರ ಹಾರಂಗಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದರು.

ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಲಾಶಯದ ಮತ್ತು ನದಿ ಭಾಗದ ನೀರಿನ ಸಂಗ್ರಹ ಮತ್ತು ಹರಿವಿನ ಬಗ್ಗೆ ವಾಸ್ತವ ಅಂಶಗಳನ್ನು ಪಡೆದು ಮಳೆಗಾಲದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಕುಶಾಲನಗರ ಪಟ್ಟಣದ ಮೈಸೂರು ರಸ್ತೆ ಕಾವೇರಿ ಸೇತುವೆ ಕೆಳಭಾಗದಲ್ಲಿ ಕಳೆದ ೨ ವರ್ಷಗಳಿಂದ ಆಗಿರುವ ಹೂಳೆತ್ತುವ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು. ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರಿಂದ ವಿವರ ಪಡೆದರು. ಪಟ್ಟಣದ ಮೂಲಕ ಮಳೆ ನೀರು ಹರಿಯುವ ಚರಂಡಿಗಳನ್ನು ಸರಿಪಡಿಸಿ ನೀರು ಬಡಾವಣೆಗಳಿಗೆ ನುಗ್ಗದಂತೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು ಕೊರೊನಾ ಸಂಕಷ್ಟದ ನಡುವೆ ಯಾವುದೇ ಸಂದರ್ಭ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಪ್ರತ್ಯೇಕ ಇಲಾಖೆಗಳಿಂದ ಸಂತ್ರಸ್ತರ ಬಗ್ಗೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಗ್ಗು ಪ್ರದೇಶದ ಜನರಿಗೆ ಈಗಾಗಲೇ ಸ್ಥಳೀಯ ಆಡಳಿತಗಳಿಂದ ನೋಟೀಸ್ ನೀಡಲಾಗಿದೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೂಡಿಗೆ: ಕೂಡಿಗೆಯಲ್ಲಿರುವ ಕ್ರೇಂದ್ರೀಯ ಜಲ ಆಯೋಗದ ಕಿರಿಯ ಅಭಿಯಂತರರ ಕಾರ್ಯಾಲಯಕ್ಕೆ ಭೇಟಿ ನೀಡಿದ ಡಿಸಿ-ಎಸ್‌ಪಿ ಕಾವೇರಿ ನದಿಯ ನೀರಿನ ಹರಿಯುವಿಕೆ ಬಗ್ಗೆ ಮತ್ತು ಕಳೆದ ಸಾಲಿನ ಕಾವೇರಿ ನದಿಯ ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು.

ನಂತರ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆ, ಕುಶಾಲನಗರದ ಸಾಯಿ ಬಡಾವಣೆ ಸೇರಿದಂತೆ ಕೆಲ ಪ್ರದೇಶಗಳು ಕಳೆದ ವರ್ಷ ಜಲಾವೃತಗೊಂಡಿದ್ದ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಸಂಪೂರ್ಣವಾದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಕಾವೇರಿ ನೀರಾವರಿ ನಿಗಮದ ಅಭಿಯಂತರ ಚಂದ್ರಕಾAತ್, ಕಾರ್ಯಪಾಲಕ ಅಭಿಯಂತರ ಮಂಜುನಾಥ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಕಂದಾಯ ಇಲಖಾ ಅಧಿಕಾರಿಗಳು, ಪ.ಪಂ. ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷ ಸುರಯ್ಯ ಭಾನು, ಪಂಚಾಯಿತಿ ಸದಸ್ಯ ಡಿ.ಕೆ. ತಿಮ್ಮಪ್ಪ, ಇಂಜಿನಿಯರ್ ಶ್ರೀದೇವಿ, ಡಿವೈಎಸ್‌ಪಿ ಶೈಲೇಂದ್ರ ಕುಮಾರ್, ವೃತ್ತ ನಿರೀಕ್ಷಕ ಮಹೇಶ್ ಮತ್ತಿತರರಿದ್ದರು.