ಕಣಿವೆ, ಜೂ. ೮: ಜೂನ್ ತಿಂಗಳ ಮೊದಲ ವಾರ ಕಳೆದರೂ ಕೂಡ ಮುಂಗಾರು ಮಳೆಯ ಲಕ್ಷಣವೇ ಗೋಚರಿಸದಿರುವುದನ್ನು ಕಂಡ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು, ಬೆಟ್ಟಗೇರಿ, ಬಸವನಹಳ್ಳಿ, ರಂಗಸಮುದ್ರ, ಕಾವೇರಿ ನದಿ ದಂಡೆಯ ಮರೂರು, ರಾಣಿಗೇಟ್, ದೊಡ್ಡಹೊಸೂರು, ಚಿಕ್ಕಹೊಸೂರು ಮೊದಲಾದ ಗ್ರಾಮಗಳ ಕೃಷಿಕರು ಪ್ರತಿ ದಿನವೂ ಮಧ್ಯಾಹ್ನವಾಯಿತು ಎಂದರೆ ಮಡಿಕೇರಿಯತ್ತ ತಿರುಗಿ ಮೇಘಗಳನ್ನು ನೋಡುತ್ತಾ ದಿನಕಳೆಯುವ ಸ್ಥಿತಿ ಉಂಟಾಗಿದೆ.

ಇದೇ ತಿಂಗಳಿನ ಕಳೆದ ಮೇ ಮಾಸಾಂತ್ಯ ಹಾಗೂ ಜೂನ್ ತಿಂಗಳ ಆರಂಭದ ಮೊದಲ ಎರಡು ಮೂರು ದಿನಗಳಲ್ಲಿ ಮುಂಗಾರು ಆರಂಭಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದ್ದವು. ಅದರಂತೆ ಮಳೆಗೂ ಮುನ್ನಾ ಮುಂಗಾರಿನ ಅಲ್ಪಾವಧಿ ಬೆಳೆಯಾದ ಮುಸುಕಿನ ಜೋಳದ ಬಿತ್ತನೆ ಮುಗಿಸಿಕೊಳ್ಳಬೇಕೆಂದು ಸಾರಾಸಗಟಾಗಿ ಬಹುತೇಕ ಮಂದಿ ಕೃಷಿಕರು ಎತ್ತುಗಳು ಹಾಗೂ ಟ್ರಾö್ಯಕ್ಟರ್‌ಗಳನ್ನೆಲ್ಲಾ ಬಾಡಿಗೆಗೆ ಕರೆಸಿ ಭೂಮಿಯನ್ನು ಉಳುಮೆ ಮಾಡಿ ಅಣಿಗೊಳಿಸಿ ಜೋಳ ಬಿತ್ತನೆ ಮಾಡಿದರು.

ಕಾವೇರಿ ನದಿಯ ನೀರನ್ನು ಆಶ್ರಯಿಸಿರುವ ಮತ್ತು ತಮ್ಮ ಭೂಮಿಯಲ್ಲಿ ಕೊಳವೆ ಬಾವಿ ಅಳವಡಿಸಿಕೊಂಡಿರುವ ಕೆಲವು ಕೃಷಿಕರು ಅನಾಯಾಸವಾಗಿ ಬಿತ್ತಿದ ಜೋಳದ ಹೊಲ ಗದ್ದೆಗಳಿಗೆ ನೀರು ಹಾಯಿಸಿಕೊಂಡು ಜೋಳವನ್ನು ಉಳಿಸಿಕೊಂಡಿದ್ದಾರೆ. ಆದರೆ ಅರೆ ನೀರಾವರಿ ಪ್ರದೇಶಗಳ ಬಹುತೇಕ ಕೃಷಿಕರಿಗೆ ವರುಣನೇ ಆಸರೆಯಾದ ಕಾರಣ ದಿನಂಪ್ರತಿ ಮೇಘಗಳನ್ನು ನೋಡಿಕೊಂಡು ದಿನಕಳೆಯುವಂತಾಗಿದೆ. ಆಗಸದಲ್ಲಿ ಕಪ್ಪು ಮೋಡಗಳು ಕೇರಳದ ಕಡೆಯಿಂದ ಕೊಡಗು ಜಿಲ್ಲೆಗೆ ಪ್ರವೇಶ ಪಡೆದು ತೂರಿ ಬಂದರೆ ಮಳೆ ಬರುವ ಆಶಾಭಾವನೆಯಲ್ಲಿ ಒಂದಷ್ಟು ಸಮಯ ಕಳೆಯುವ ಕೃಷಿಕರು, ಒಂದು ವೇಳೆ ಆಗಸದಲ್ಲಿ ಕಪ್ಪು ಮೋಡ ಮರೆಯಾಗಿ ತಿಳಿ ಮೋಡದೊಂದಿಗೆ ಸೂರ್ಯನ ಪ್ರಖರ ಗೋಚರಿಸಿದರೇ ‘ಅಯ್ಯೋ ಮಳೆ ಬದಲು ಬಿಸಿಲು ಬರುತ್ತಾ ಇದೆಯಲ್ಲ. ಅದೂ ಬೇಸಿಗೆಯ ರಣ ಬಿಸಿಲು. ಹೋಯಿತು ಬಿಡು ಈ ಬಾರಿಯ ಜೋಳ ಬಿತ್ತನೆ ಹೋಯಿತು ಬಿಡು. ಜೋಳ ಬಿತ್ತನೆಗೆ ವ್ಯಯ ಮಾಡಿದ ಹಣ’ ಎಂದು ಕೊರಗುತ್ತಿದ್ದಾರೆ.

ಸಾಲ ಸೋಲ ಮಾಡಿ ಕಡಿಮೆ ಖರ್ಚಿನ ಅಲ್ಪಾವಧಿಯ ಬೆಳೆಯಾಗಿರುವ ಈ ಮುಸುಕಿನ ಜೋಳವನ್ನು ಈ ಭಾಗದಲ್ಲಿ ಅತ್ಯಂತ ಹೆಚ್ಚು ರೈತರು ಬೆಳೆಯುತ್ತಾರೆ. ಜೊತೆಗೆ ಬಹಳಷ್ಟು ರೈತರು ಕಳೆದ ವರ್ಷ ಬೆಳೆದಂತಹ ಮರಗೆಣಸು, ಕ್ಯಾನೆ, ಸುವರ್ಣ ಗೆಡ್ಡೆ ಮೊದಲಾದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ದರ ದೊರಕದೇ ನಷ್ಟಕ್ಕೆ ತುತ್ತಾದವರು, ಈ ಬಾರಿ ಜೋಳ ಬೆಳೆಯಲು ಮುಂದಾಗಿದ್ದರು. ಜೋಳದ ಫಸಲಿಗೆ ವರ್ಷದ ಎಲ್ಲಾ ಕಾಲದಲ್ಲಿಯೂ ಇದ್ದುದರಲ್ಲಿ ಉತ್ತಮವಾದ ದರ ದೊರಕುವ ಕಾರಣ ಜೋಳವೇ ವಾಸಿ ಎಂದು ಬಿತ್ತನೆ ಮಾಡಿದ್ದರು.

ಮಳೆ ಈಗಲೂ ಒಂದೆರಡು ದಿನಗಳಲ್ಲಿ ಜೋಳ ಬಿತ್ತನೆ ಮಾಡಿರುವ ಪ್ರದೇಶಗಳಲ್ಲಿ ಸುರಿದರೆ ಬಿತ್ತಿದ ಅರ್ಧ ಭಾಗವಾದರೂ ಬೆಳೆಯುತ್ತದೆ. ಒಂದು ವೇಳೆ ಮತ್ತೆ ಮುಂದಿನ ಮಾರ್ನಾಲ್ಕು ದಿನ ಮಳೆ ಬಾರದೇ ಹೋದರೆ ಕಳೆದ ಜೂನ್ ತಿಂಗಳ ಎರಡು ಮೂರು ದಿನಗಳಲ್ಲಿ ಜೋಳ ಬಿತ್ತನೆ ಮಾಡಿದ ಕೃಷಿಕರು ಮತ್ತೆ ಹೊಸದಾಗಿ ಬಿತ್ತನೆ ಮಾಡಬೇಕಾಗುತ್ತದೆ. ಬದಲೀ ಬಿತ್ತನೆಗೆ ಮತ್ತದೇ ಉಳುಮೆ, ಬಿತ್ತನೆ ಬೀಜ, ಕಾರ್ಮಿಕರ ಬಳಕೆ ಅಂದುಕೊAಡು ಮತ್ತೆ ಎಕರೆಗೆ ತಲಾ ಹತ್ತಾರು ಸಾವಿರ ರೂ.ಗಳನ್ನು ವ್ಯಯ ಮಾಡಬೇಕಾಗುತ್ತದೆ. ಈಗಾಗಲೇ ಕೊರೊನಾ ಉಂಟುಮಾಡಿರುವ ಸಂಕಷ್ಟದಲ್ಲಿ ಮುಳುಗಿರುವ ಕೃಷಿಕರಿಗೆ ಈ ಬಾರಿ ಮುಂಗಾರಿನ ವರುಣ ಮತ್ತೆ ಸಂಕಟ ಒಡ್ಡುತ್ತಿದ್ದಾನೆ.

ಒಟ್ಟಾರೆ ಹೊಡೆತದ ಮೇಲೆ ಹೊಡೆತ ಬಿದ್ದು ಆರ್ಥಿಕವಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಕೃಷಿಕರನ್ನು ಆ ದೇವರೇ ಕಾಪಾಡಬೇಕಿದೆ.

-ಕೆ.ಎಸ್. ಮೂರ್ತಿ