@ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೮: ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿರುವÀ ಬಿ.ಪಿ.ಎಲ್ ಹಾಗೂ ಅಂತ್ಯೋದಯ ಕಾರ್ಡ್ಗಳನ್ನು ನಿಯಮ ಮೀರಿ ಪಡೆದುಕೊಂಡವರನ್ನು ಪತ್ತೆ ಹಚ್ಚಿ ಅಂತಹ ಕಾರ್ಡ್ಗಳನ್ನು ಅನರ್ಹಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೩೫೦೯ ಕಾರ್ಡ್ನ ಮಾನ್ಯತೆ ಕಳೆದುಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು ೧,೪೧,೯೪೧ ಮಂದಿ ಪಡಿತರ ಕಾರ್ಡ್ದಾರರಿದ್ದು, ಸರಕಾರದಿಂದ ಅಕ್ಕಿ, ಬೇಳೆ, ಸೀಮೆಎಣ್ಣೆ, ಧಾನ್ಯ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳು ಆರ್ಥಿಕವಾಗಿ ಹಿಂದುಳಿದವರ ಕೈ ಸೇರುತ್ತಿದೆ. ಅದಲ್ಲದೆ ಸರಕಾರದ ಯೋಜನೆ ಪಡೆಯಲು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಸಹಕಾರಿಯಾಗುತ್ತಿದೆ. ಆದರೆ, ಕೆಲವು ತಪ್ಪು ಮಾಹಿತಿ ನೀಡಿ ಅಥವಾ ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಿದರು ಬಿ.ಪಿ.ಎಲ್. ಹಾಗೂ ಅಂತ್ಯೋದಯ ಕಾರ್ಡ್ನಿಂದ ಹೊರಬಾರದವರನ್ನು ಪತ್ತೆಹಚ್ಚಲಾಗಿದ್ದು, ಅಂತವರ ಕಾರ್ಡ್ಗಳು ಇದೀಗ ಮಾನ್ಯತೆ ಕಳೆದುಕೊಂಡಿದ್ದು, ಇಲಾಖೆ ಕ್ರಮ ಕೈಗೊಂಡಿದೆ.

ಬಿ.ಪಿ.ಎಲ್ ಕಾರ್ಡ್ ಪಡೆಯಬೇಕಾದರೆ ಕೆಲವೊಂದು ಮಾನದಂಡಗಳಿವೆ. ಆದಾಯ ಮಿತಿ ರೂ ೧.೨೦ ಲಕ್ಷದೊಳಗಿರಬೇಕು. ಸ್ವಂತ ಬಳಕೆಗೆ ನಾಲ್ಕುಚಕ್ರ ವಾಹನಗಳಿರಬಾರದು. ತೆರಿಗೆ ಪಾವತಿದಾರರಾಗಿರಬಾರದು. ಅಂತ್ಯೋದಯ ಕಾರ್ಡ್ ಪಡೆಯಬೇಕಾದರೆ ಭೂರಹಿತ ಕೃಷಿ ಕಾರ್ಮಿಕರು, ಕುಶಲಕರ್ಮಿಗಳು, ವಿಶೇಷ ಚೇತನರು, ವೃದ್ಧರು, ಸಾಮಾಜಿಕ ಬೆಂಬಲವಿಲ್ಲದ ಕುಟುಂಬದವರಾಗಿರಬೇಕು ಸೇರಿದಂತೆ ಇನ್ನಿತರ ನಿಯಮಗಳಿವೆ. ಆದರೆ, ಕೆಲವರು ಇದನ್ನು ಗಾಳಿಗೆ ತೂರಿ ಕಾರ್ಡ್ ಪಡೆದುಕೊಂಡಿದ್ದರು. ಅಂತವರನ್ನು ಆಹಾರ ಇಲಾಖೆ ಪತ್ತೆ ಹಚ್ಚಿದ್ದು, ಕಾರ್ಡ್ನ ಮಾನ್ಯತೆ ರದ್ದುಗೊಳಿಸುವುದರ ಜೊತೆಗೆ ದಂಡ ವಿಧಿಸಿದೆ.

೩೫೦೯ ಕಾರ್ಡ್ ರದ್ದು

ಕೊಡಗು ಜಿಲ್ಲೆಯಲ್ಲಿ ಒಟ್ಟು ೩೫೦೯ ಪಡಿತರ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಈ ಪೈಕಿ ೮೯ ಅಂತ್ಯೋದಯ ಹಾಗೂ ೧೩೨೫ ಬಿ.ಪಿಎಲ್ ಕಾರ್ಡ್ ಸೇರಿದಂತೆ ಒಟ್ಟು ೧೪೧೪ ಕಾರ್ಡ್ಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ನಿಯಮ ಉಲ್ಲಂಘಿಸಿ ಕಾರ್ಡ್ ಇರುವುದು ತಿಳಿದು ಬಂದಿದೆ.

ಅದಲ್ಲದೆ ರಾಜ್ಯ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ೨೦೯೫ ಕಾರ್ಡ್ಗಳು ನಿಯಮ ಮೀರಿ ಇರುವುದು ತಿಳಿದು ಬಂದಿದೆ. ಇದರಲ್ಲಿ ತೆರಿಗೆ ಪಾವತಿದಾರರು, ಆದಾಯ ಮಿತಿ ಹೆಚ್ಚಿರುವುವವರು ಒಳಗೊಂಡಿದ್ದಾರೆ.

೫೪೧ ‘ಟ್ಯಾಕ್ಸ್ ಪೇರ‍್ಸ್’

ಜಿಲ್ಲೆಯ ೫೪೧ ತೆರಿಗೆ ಪಾವತಿದಾರರು (ಟ್ಯಾಕ್ಸ್ ಪೇರ‍್ಸ್) ಬಿ.ಪಿ.ಎಲ್ ಹಾಗೂ ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರು ಎಂದು ಪರಿಶೀಲನೆ ವೇಳೆ ದೃಢಪಟ್ಟಿದೆ.

ಮಡಿಕೇರಿ ತಾಲೂಕಿನಲ್ಲಿ ೫ ಅಂತ್ಯೋದಯ, ೭೧ ಬಿಪಿಎಲ್, ಸೋಮವಾರಪೇಟೆ ತಾಲೂಕಿನಲ್ಲಿ ೧೧ ಅಂತ್ಯೋದಯ, ೩೧೪ ಬಿ.ಪಿ.ಎಲ್, ವೀರಾಜಪೇಟೆ ತಾಲೂಕಿನಲ್ಲಿ ೬ ಅಂತ್ಯೋದಯ, ೧೩೪ ಬಿ.ಪಿ.ಎಲ್. ಕಾರ್ಡ್ ಹೊಂದಿರುವರು ತೆರಿಗೆ ಪಾವತಿದಾರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೊತೆಗೆ ಬಿ.ಪಿ.ಎಲ್. ಹಾಗೂ ಅಂತ್ಯೋದಯ ಮಾನ್ಯತೆ ಪಡೆಯಲು ಇರುವ ರೂ ೧.೨೦ ಲಕ್ಷ ಮಿತಿ ಮೀರಿ ಆದಾಯ ಇರುವ ೧೫೫೪ ಕುಟುಂಬಗಳ ಕಾರ್ಡ್ ಅನರ್ಹಗೊಳಿಸಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨೬ ಅಂತ್ಯೋದಯ, ೬೫೨ ಬಿ.ಪಿ.ಎಲ್., ಸೋಮವಾರಪೇಟೆ ತಾಲೂಕಿನಲ್ಲಿ ೯ ಅಂತ್ಯೋದಯ, ೨೮೦ ಬಿ.ಪಿ.ಎಲ್, ವೀರಾಜಪೇಟೆ ತಾಲೂಕಿನಲ್ಲಿ ೩೦ ಅಂತ್ಯೋದಯ, ೫೫೭ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರ ಕಾರ್ಡ್ ರದ್ದುಗೊಳಿಸಲಾಗಿದೆ.

ಕಣ್ಣಿಟ್ಟಿರುವ ಆಹಾರ ಇಲಾಖೆ

ನಿಯಮ ಉಲ್ಲಂಘಿಸಿ ಕಾರ್ಡ್ ಪಡೆದವರನ್ನು ಪತ್ತೆಗೆ ಆಹಾರ ಇಲಾಖೆ ಕಣ್ಣಿಟ್ಟಿದೆ. ಈಗಾಗಲೇ ಪರಿಶೀಲನೆ ನಡೆಸಿ ಜಿಲ್ಲಾ ಮಟ್ಟದಲ್ಲಿ ನಿಯಮ ಉಲ್ಲಂಘಿಸಿ ಕಾರ್ಡ್ ಪಡೆದವರನ್ನು ಕಂಡುಹಿಡಿಯಲಾಗಿದೆ. ಇದರೊಂದಿಗೆ ರಾಜ್ಯ ಮಟ್ಟದ ಅಧಿಕಾರಿಗಳು ಆಧಾರ್ ಕಾರ್ಡ್ ಹಿನ್ನೆಲೆಯಲ್ಲಿ ಕಾರ್ಡ್ ಪಡೆದವರು ಅರ್ಹರ, ಅನರ್ಹರ ಎಂದು ಪತ್ತೆಹಚ್ಚುತ್ತಾರೆ.

ಈಗಾಗಲೇ ಕಾರ್ಡ್ ಪಡೆದ ಅನರ್ಹರು ಆದಾಯ ಹೆಚ್ಚಾದ ಅಥವಾ ಆದಾಯ ತೆರಿಗೆ ಪಾವತಿ ಮಾಡಿದ ದಿನದಿಂದ ಇದುವರೆಗೂ ಪಡೆದ ಪಡಿತರದ ಒಟ್ಟು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಿದೆ. ಇದುವರೆಗೂ ಬಿಪಿಎಲ್‌ನಿಂದ ಅನರ್ಹರಾದವರನ್ನು ಎ.ಪಿ.ಎಲ್ ಕಾರ್ಡ್ ಗುಂಪಿಗೆ ಸೇರಿಸಲಾಗಿದೆ.